ಬೆಳಗಾವಿ:- ಬಿಜೆಪಿ ನಾಯಕರು ಬರಗಾಲದ ಬಗ್ಗೆ ಸುಮ್ಮನೆ ಮಾತನಾಡುವ ಬದಲು ಕೇಂದ್ರದಿಂದ ಪರಿಹಾರ ತರಲಿ. ಜತೆಗೆ ನರೇಗಾ ಯೋಜನೆಯಡಿ ಮಾನವ ದಿನಗಳನ್ನು 150ಕ್ಕೆ ಹೆಚ್ಚಳ ಮಾಡಿಸಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ನಗರದ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು ರಾಜ್ಯ ಬಿಟ್ಟು ತೆಲಂಗಾಣಕ್ಕೆ ಹೋಗಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದರು. ಬರಗಾಲ ಬಂದಿದೆ. ವಿಪಕ್ಷ ನಾಯಕರು ಕೂಡ ಬರ ಅಧ್ಯಯನಕ್ಕಾಗಿ ಓಡಾಡಿದ್ದಾರೆ.
ಅವರು ಕೇಂದ್ರದಿಂದ ಪರಿಹಾರ ಕೊಡಿಸಲಿ. ನರೇಗಾದಡಿ 100 ಕೆಲಸದ ದಿನಗಳನ್ನು 150 ದಿನಗಳಿಗೆ ವಿಸ್ತರಿಸಬಹುದು. ಇದನ್ನು ಕೇಂದ್ರದಿಂದ ಘೋಷಣೆ ಮಾಡಿಸುತ್ತಿಲ್ಲ ಯಾಕೆ? ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಕೊಡಿಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು. ನಮ್ಮ ಸರ್ಕಾರದಲ್ಲಿ ಕಂದಾಯ ಹಾಗೂ ಕೃಷಿ ಸಚಿವರು ಎಲ್ಲರಿಗಿಂತ ಮುಂಚಿತವಾಗಿ ರಾಜ್ಯದ ಬರ ಪರಿಸ್ಥಿತಿ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಕ್ಕೆ ತುತ್ತಾಗಿದ್ದು, ಪರಿಹಾರ ಬೇಕು ಎಂದಿದ್ದಾರೆ. ಈವರೆಗೂ ಕೇಂದ್ರ ಸರ್ಕಾರ ಬಿಡಿಗಾಸು ಪರಿಹಾರ ನೀಡಿಲ್ಲ ಎಂದರು.