ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ 44ರ ರಸ್ತೆ ಬದಿಯಲ್ಲಿರುವ ಅಮಾನಿಗೋಪಾಲಕೃಷ್ಣ ಕೆರೆ ಹಿನ್ನೀರಿನ ಹೊಂಡದಲ್ಲಿ ಕಾರು ಮುಳುಗಿ ನಾಲ್ಕು ಜನ ವಿದ್ಯಾರ್ಥಿಗಳು ಜಲಸಮಾಧಿಯಾದ ಘಟನೆ ಜರುಗಿದೆ.
ಚಿಕ್ಕಬಳ್ಳಾಪುರದ ಬೈಪಾಸ್ ರಸ್ತೆಯಿಂದ ನಗರದ ಕೆಳಗಿನ ತೋಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿರುವ ಅಂಜನೇಯ ಸ್ವಾಮಿ ದೇವಾಲಯದ ಮುಂಬಾಗದಲ್ಲಿ ಈ ಘಟನೆ ನಡೆದಿದೆ.
ಕಾಫಿ ಕುಡ್ಕೊಂಡು ಬರೋಣ ಅಂತ ಸ್ವಿಫ್ಟ್ ಕಾರಿನಲ್ಲಿ ಜಾಲಿ ರೈಡ್ ಗೆ ಹೋಗೋಣ ಅಂತ ನಾಲ್ಕು ಜನ ಸ್ನೇಹಿತರು ಹೊರಟಿದ್ದರು, ಜಾಲಿ ರೈಡ್ ವೇಳೆ ಅತಿ ವೇಗದಿಂದ ಚಲಾಯಿಸಿಕೊಂಡು ಬರುವಾಗ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ನೀರಿನ ಹೊಂಡಕ್ಕೆ ಹಾರಿಬಿದ್ದ ಕಾರು ನೀರಿನಲ್ಲಿ ಮುಳುಗಿದೆ.
ಏನೋ ಸದ್ದು ಬಂತಲ್ಲ ಅಂತ ಹಿಂಬದಿಯಿಂದ ಬರುತ್ತಿದ್ದ ಆಂಬುಲೆನ್ಸ್ ಚಾಲಕ ಇಳಿದು ನೋಡಿದ್ದಾನೆ. ಅಷ್ಟರಲ್ಲಿ ಕಾರು ನೀರಿನಲ್ಲಿ ಉಲ್ಟಾ ಮುಳುಗಿ ನಾಲ್ಕೂ ಜನ ಜಲಸಮಾಧಿಯಾಗಿದ್ರು.
ತಕ್ಷಣ ಅಗ್ನಿಶಾಮಕದಳದ ಸಿಬ್ಬಂದಿ ಹಾಗು ಸ್ಥಳೀಯರು ಮುಳುಗಿದ್ದ ಕಾರನ್ನ ಕ್ರೇನ್ ಮೂಲಕ ಮೇಲಕ್ಕೆತ್ತಿದ್ದಾರೆ. ಇನ್ನು ಘಟನೆಯಲ್ಲಿ ಮೃತಪಟ್ಟವರೆಲ್ಲಾ ಯಲಹಂಕದ ಪ್ರತಿಷ್ಠಿತ ರೇವಾ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಮೃತರನ್ನ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ 20 ವರ್ಷದ ಠ್ಯಾಗೂರ್ (20), ಚಿಕ್ಕಬಳ್ಳಾಪುರ ನಗರದ 19 ವರ್ಷದ ಆರ್ಯನ್, 20 ವರ್ಷದ ವಸಂತ್ ಮತ್ತು 18 ವರ್ಷದ ಪವನ್ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಹೆದ್ದಾರಿಯ 44ರ ಘಟನಾ ಸ್ಥಳದಲ್ಲಿ ಯಾವುದೇ ತಡೆಗೋಡೆ ಇಲ್ಲದೇ ಇರೋದು ಹಾಗೂ ಯಾವುದೇ ಸೂಚನಾ ಫಲಕಗಳು ಅಳವಡಿಸದೇ ಇರೋದೇ ದುರಂತಕ್ಕೆ ಕಾರಣ ಎನ್ನಲಾಗಿದೆ.
ಅವೈಜ್ಞಾನಿಕವಾಗಿ ಹೆದ್ದಾರಿ ಕಾಮಗಾರಿ ನಡೆಸಿದ್ದು, ಇಂತಹ ಕಾಮಗಾರಿಯಿಂದ ಇನ್ನೂ ಅದೆಷ್ಟು ಜನ ಪ್ರಾಣ ಕಳೆದುಕೊಳ್ಳಬೇಕು? ಘಟನೆಗೆ ಹೊಣೆ ಯಾರು ಅಂತ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಪದೇ ಪದೇ ಅಪಘಾತಗಳಾಗುತ್ತಿದ್ದರೂ ಸಂಬಂದಪಟ್ಟ ಅಧಿಕಾರಿಗಳು ಮಾತ್ರ ಗಾಢ ನಿದ್ರೆಗೆ ಜಾರಿರೋದು ದುರಂತವೇ ಸರಿ.



