ಬೆಳಗಾವಿ: ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.
ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು 7 ಜನರನ್ನು ಅರೆಸ್ಟ್ ಮಾಡಲಾಗಿದೆ.
ಪ್ರೀತಿಸಿದ್ದ ಯುವತಿ ಜೊತೆ ಗ್ರಾಮದ ಯುವಕ ಓಡಿ ಹೋಗಿದ್ದ. ಇದರಿಂದ ಆಕ್ರೋಶಗೊಂಡ ಯುವತಿಯ ಕುಟುಂಬಸ್ಥರು ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಅಮಾನವೀಯ ವರ್ತನೆ ತೋರಿದ್ದಾರೆ.
ಸದ್ಯ ಪ್ರಕರಣ ಸಂಬಂಧ ಮಹಿಳೆಯರು ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ. ಯುವತಿಗೆ ಬೇರೆಯವರ ಜೊತೆ ಮದುವೆ ನಿಶ್ಚಯವಾಗಿತ್ತು. ಯಾದೀ ಮೇ ಶಾದಿ ಮಾಡಲು ಯುವತಿಯ ಕುಟುಂಬಸ್ಥರು ನಿರ್ಧರಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ನಿನ್ನೆ ಮಧ್ಯರಾತ್ರಿ ಯುವತಿಯನ್ನು ಕರೆದುಕೊಂಡು ಯುವಕ ದುಂಡಪ್ಪ ಓಡಿ ಹೋಗಿದ್ದ.
ಇದರಿಂದ ಆಕ್ರೋಶಗೊಂಡ ಯುವತಿಯ ಕುಟುಂಬಸ್ಥರು ಯುವಕನ ಮನೆಗೆ ನುಗ್ಗಿ ಮಲಗಿದ್ದ ಯುವಕನ ತಾಯಿಯನ್ನು ಹೊರಗೆಳೆದು ಮಹಿಳೆ ಮೇಲೆ ಹಲ್ಲೆ ನಡೆಸಿ ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ್ದಾರೆ.
ಬಳಿಕ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಮಹಿಳೆಯರು ಸೇರಿ ಒಂಬತ್ತು ಜನರ ವಿರುದ್ಧ ದೂರು ದಾಖಲಾಗಿದ್ದು 7 ಜನ ಅರೆಸ್ಟ್ ಆಗಿದ್ದಾರೆ.