ಬೆಳಗಾವಿ:- ಬೆಂಗಳೂರು ಬಳಿಯ ಸೋಲದೇನಹಳ್ಳಿಯಲ್ಲಿ ನಿರ್ಮಿಸಿರುವ ಪಶು ಆಸ್ಪತ್ರೆ ಮುಂಭಾಗದಲ್ಲಿ ಅವರ ಪ್ರತಿಮೆ ನಿರ್ಮಾಣ ಮಾಡುವ ಕುರಿತು ಮುಖ್ಯಮಂತ್ರಿ ಜತೆ ಸಮಾಲೋಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಲೀಲಾವತಿ ನಿಧನಕ್ಕೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಸಂತಾಪ ಸೂಚಿಸಿ ನುಡಿನಮನ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಶಾಸಕಿ, ನಟಿ ಉಮಾಶ್ರೀ, ‘ಜಾನುವಾರು ರಕ್ಷಣೆಯಲ್ಲಿ ಲೀಲಾವತಿ ಪಾತ್ರ ಮಹತ್ವದ್ದು. ಅವರು ನಿರ್ಮಿಸಿರುವ ಪಶು ಆಸ್ಪತ್ರೆಯ ಮುಂದೆ ಪ್ರತಿಮೆ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಡಿಕೆಶಿ, ‘ಲೀಲಾವತಿ ಅವರ ಬಳಿ ಹಣವಿಲ್ಲದಿದ್ದರೂ ಹೃದಯವಂತಿಯಲ್ಲಿ ಬಹಳ ದೊಡ್ಡ ಶ್ರೀಮಂತರು. ತಮ್ಮ ಬದುಕಿನಲ್ಲಿ ಅನೇಕ ಕಷ್ಟ ಬಂದರೂ ಅವರು ಪರೋಪಕಾರಕ ಜೀವನ ನಡೆಸಿದರು.ಲೀಲಾವತಿ ಅವರ ಬಳಿ ಹಣವಿಲ್ಲದಿದ್ದರೂ ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟು ಹೋಗಿದ್ದಾರೆ. ಹೀಗಾಗಿ ಅವರು ನಿಜಕ್ಕೂ ಧನವಂತರು.ಅವರು ಕಟ್ಟಿರುವ ಪಶುವೈದ್ಯ ಆಸ್ಪತ್ರೆ ಮುಂಭಾಗದಲ್ಲಿ ಅವರ ಪ್ರತಿಮೆ ನಿರ್ಮಾಣ ಮಾಡುವ ಕುರಿತು ಸಿಎಂ ಜತೆ ಚರ್ಚಿಸಲಾಗುವುದು’ ಎಂದರು.