ಬೆಳಗಾವಿ:- ರಾಜ್ಯ ಸರ್ಕಾರದ ವಿರುದ್ಧ ಬಿ.ವೈ ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆಯಲ್ಲಿ ಮಾತನಾಡಿ, ಬರದಿಂದ ರೈತರು ಎದುರಿಸುತ್ತಿರುವ ಸಮಸ್ಯೆ, ನನೆಗುದಿಗೆ ಬಿದ್ದ ನೀರಾವರಿ ಯೋಜನೆ, ವಿದ್ಯುತ್ ಅಭಾವ ಹೀಗೆ ವಿವಿಧ ವಿಚಾರ ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡರು.
ಬಿಜೆಪಿ ಸರ್ಕಾರ ಈ ಭಾಗದಲ್ಲಿ ಚಾಲನೆ ನೀಡಿದ್ದ ವಿವಿಧ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಈ ಯೋಜನೆಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಪಾದಯಾತ್ರೆ ಮಾಡಿದ್ದ ಕೈ ನಾಯಕರು ತಮ್ಮದೇ ಸರ್ಕಾರವಿದ್ದರೂ ನೀರಾವರಿಗೆ ಏಕೆ ಹಣ ನೀಡಲಿಲ್ಲ? ಎಂದು ರೈತರಿಗೆ ಉತ್ತರ ನೀಡಬೇಕು ಎಂದರು.
ವಿದ್ಯುತ್ ಅಭಾವದಿಂದ ಜನತೆ ಪರಿತಪಿಸುತ್ತಿದ್ದಾರೆ. ರೈತರಿಂದ ಸಾಲ ವಸೂಲಿ ಮಾಡಲಾಗುತ್ತಿದ್ದು, ವಸೂಲಿ ನಿಲ್ಲಿಸಲು ಸೂಚಿಸಬೇಕು. ಬರ ನಿರ್ವಹಣೆಗೆ ಕೇಂದ್ರದ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು, ಮೊದಲು ತನ್ನ ಪಾಲಿನ ನಿಧಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಪಶು ಆಹಾರ ದರ ಏರಿಸಿ ಗಾಯದ ಮೇಲೆ ಬರೆ ಎಳೆದಿದೆ. ಬೆಳೆ ನಷ್ಟ, ಸಾಲ ವಸೂಲಿ ಒತ್ತಡದಿಂದ 456 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ ರಾಜ್ಯಕ್ಕೆ ಪ್ರತಿ ನಿತ್ಯ ಸರಾಸರಿ 16 ಸಾವಿರ ಮೆಗಾವಾಟ್ ವಿದ್ಯುತ್ ಅವಶ್ಯಕತೆ ಇದ್ದು, ಸದ್ಯ 10-11 ಸಾವಿರ ಮೆಗಾವಾಟ್ ಅಷ್ಟೇ ಉತ್ಪಾದನೆಯಾಗುತ್ತಿದೆ.
ಬೇರೆ ರಾಜ್ಯದಿಂದ ವಿದ್ಯುತ್ ಖರೀದಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ಕುಟುಕಿದರು. ರೈತರ ಪಂಪ್ಸೆಟ್ ಅಕ್ರಮ ಸಕ್ರಮ ಮಾಡುವ ತೀರ್ವನದಿಂದ ಹಿಂದೆ ಸರಿದ ಸರ್ಕಾರ, ರೈತರೇ ಮೂಲಸೌಲಭ್ಯ ಕಲ್ಪಿಸಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ. ಇದರಿಂದ ರೈತರಿಗೆ 2-2.25 ಲಕ್ಷ ರೂ. ಹೊರೆ ಬೀಳಲಿದೆ ಎಂದರು.