ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕು ಯಲವಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಮಾನವೀಯ ಕೃತ್ಯ ನಡೆದಿತ್ತು. ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಲಾಗಿತ್ತು. ಸದ್ಯ ಪ್ರಾಂಶುಪಾಲೆ ಭಾರತಮ್ಮ, ಸಹ ಶಿಕ್ಷಕ ಮುನಿಯಪ್ಪರನ್ನು ಮಾಸ್ತಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಪ್ರಾಂಶುಪಾಲೆ ಭಾರತಮ್ಮ, ಸಹ ಶಿಕ್ಷಕ ಮುನಿಯಪ್ಪ ಬಂಧಿತರು. ಹಾಸ್ಟೆಲ್ ವಾರ್ಡನ್ ಮಂಜುನಾಥ್ ಮತ್ತು ಅತಿಥಿ ಶಿಕ್ಷಕ ಅಭಿಷೇಕ್ ಪರಾರಿ ಆಗಿದ್ದು, ಹುಡುಕಾಟ ನಡೆಸುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ದೂರು ಹಿನ್ನೆಲೆ ಮಲಹೊರುವ ಪದ್ಧತಿ ನಿಯಂತ್ರಣ ಕಾಯ್ದೆ, ಅಟ್ರಾಸಿಟಿ ಕಾಯ್ದೆಯಡಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಕಳೆದ ಹಲವು ದಿನಗಳಿಂದ ಮಕ್ಕಳಿಗೆ ವಿವಿಧ ರೀತಿಯಲ್ಲಿ ಕಿರುಕುಳ ಕೂಡ ನೀಡಲಾಗುತ್ತಿದೆ ಅಂತಾ ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್, ಹಾಗೂ ವಾರ್ಡನ್ ಮಂಜುನಾಥ್ ಸೇರಿ ಕೆಲವು ಶಿಕ್ಷಕರ ವಿರುದ್ಧ ಆರೋಪ ಕೇಳಿಬಂದಿತ್ತು. ಮಕ್ಕಳಿಗೆ ಥಳಿಸುತ್ತಿರೋ, ಶಿಕ್ಷೆ ಕೊಡುತ್ತಿರುವ ವಿಡಿಯೋಗಳು ಕೂಡ ಲಭ್ಯವಾಗಿದ್ದವು.
ಈ ವಸತಿ ಶಾಲೆಯಲ್ಲಿ ಮಕ್ಕಳಿಗೆ ಕಿರುಕುಳ ಆರೋಪದ ಜೊತೆಗೆ ಮತ್ತೊಂದು ಗಂಭೀರ ಆರೋಪವೂ ಕೇಳಿಬಂದಿದೆ. ಪೊಷಕರೊಬ್ಬರು ಮತ್ತೊಂದು ಸ್ಟೋಟಕ ಹೇಳಿಕೆ ನೀಡಿದ್ದಾರೆ. ಹೆಣ್ಣು ಮಕ್ಕಳು ಬಟ್ಟೆ ಬದಲಿಸುವ ಫೋಟೋ ಕೂಡ ತಗೆಯಲಾಗ್ತಿತ್ತು ಅಂತಾ ಆರೋಪಿಸಿದ್ದಾರೆ. ಶಾಲೆಯಲ್ಲಿ ಹೆಣ್ಣು ಮಕ್ಕಳ ಬಟ್ಟೆ ಬದಲಿಸುವ ಫೋಟೋ ತೆಗೆದ ವಿಷಯ ಶುದ್ಧ ಸುಳ್ಳು. ಶಾಲೆಯಲ್ಲಿ ಮಾರೇಶ್, ಚಿತ್ರಕಲಾ ಶಿಕ್ಷಕರು ಮುನಿಯಪ್ಪರಿಂದ ಗುಂಪುಗಾರಿಕೆ ನಡೆದಿದೆ ಅಂತಾ ಪ್ರಾಂಶುಪಾಲೆ ಭಾರತಮ್ಮ ಆರೋಪಿಸಿದ್ದಾರೆ.