ಚಹಾ ಮತ್ತು ಕಾಫಿಯ ಪಿ.ಹೆಚ್ ಮೌಲ್ಯವು ಆಮ್ಲೀಯತೆಯ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಿರುವಾಗ ನೀವು ಖಾಲಿ ಹೊಟ್ಟೆಯಲ್ಲಿ ಚಹಾವನ್ನು ಸೇವಿಸಿದರೆ ಅದು ಅಸಿಡಿಟಿ ಮತ್ತು ಎದೆಯುರಿ ಸಮಸ್ಯೆಯನ್ನು ಉಂಟುಮಾಡಬಹುದು. ಅಷ್ಟೇ ಅಲ್ಲ ಚಯಾಪಚಯ ಕ್ರಿಯೆಯು ಇದರಿಂದಾಗಿ ತೊಂದರೆಗೀಡಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ನಿಮಗೂ ಇದ್ದರೆ ಬೆಳಗ್ಗೆ ಎದ್ದ ತಕ್ಷಣ ಚಹಾ ಏಕೆ ಕಾಫಿಯನ್ನು ಕುಡಿಯಬಾರದು ಮತ್ತು ಚಹಾವನ್ನು ಕುಡಿಯಲು ಸರಿಯಾದ ಸಮಯ ಯಾವುದು ಎಂಬುದನ್ನು ತಿಳಿಯಿರಿ.
ನಿರ್ಜಲೀಕರಣ; ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ರಾತ್ರಿ ಸುಮಾರು 8 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡುತ್ತೇವೆ. ಇದರಿಂದ ಹೊಟ್ಟೆಯು ಸಂಪೂರ್ಣವಾಗಿ ಖಾಲಿಯಾಗಿರುತ್ತದೆ. ಹಾಗಿರುವಾಗ ಬೆಳಗ್ಗೆ ಎದ್ದ ತಕ್ಷಣ ಚಹಾ ಸೇವಿಸಿದರೆ ಅದು ದೇಹದಲ್ಲಿ ನಿರ್ಜಲೀಕರಣವನ್ನು ಉಂಟುಮಾಡುತ್ತದೆ. ಈ ನಿರ್ಜಲೀಕರಣವು ಸ್ನಾಯು ಸೆಳೆತ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ಉಂಟುಮಾಡುತ್ತದೆ.
ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ: ಖಾಲಿ ಹೊಟ್ಟೆಯಲ್ಲಿ ಚಹಾ ಸೇವಿಸುವುದರಿಂದ ಹಸಿವು ಕಡಿಮೆಯಾಗುತ್ತದೆ. ಮತ್ತು ಇದರಿಂದಾಗಿ ಗಂಟೆಗಟ್ಟಲೆ ಆಹಾರವನ್ನು ಸೇವಿಸದೆ ಇರುತ್ತೇವೆ. ಈ ಕಾರಣದಿಂದಾಗಿ ಹೊಟ್ಟೆಯಲ್ಲಿ ಅಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಚಯಾಪಚಯಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ: ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವ ಅಭ್ಯಾಸವು ಚಯಾಪಚಯ ಕ್ರಿಯೆಯ ಮೇಲೂ ಪರಿಣಾಮವನ್ನು ಬೀರಬಹುದು. ಇದು ಜೀರ್ಣಕ್ರಿಯೆಯನ್ನು ಹದಗೆಡಿಸುತ್ತದೆ. ಮತ್ತು ಅಸಿಡಿಟಿ, ಗ್ಯಾಸ್ ಇತ್ಯಾದಿ ಹೊಟ್ಟೆ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಪೋಷಕಾಂಶಗಳ ಮೇಲೆ ಪರಿಣಾಮ ಬೀರುತ್ತದೆ: ಖಾಲಿ ಹೊಟ್ಟೆಯಲ್ಲಿ ಚಹಾವನ್ನು ಕುಡಿಯುವುದರಿಂದ ದೇಹವು ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ದೇಹದಲ್ಲಿ ಅನೇಕ ರೀತಿಯ ಪೋಷಕಾಂಶಗಳ ಕೊರತೆ ಉಂಟಾಗಬಹುದು. ಮತ್ತು ವ್ಯಕ್ತಿಯು ವಿವಿಧ ರೀತಿಯ ಕಾಯಿಲೆಗಳಿಗೆ ಬಲಿಯಾಗಬಹುದು.
ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ: ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ದೇಹದ ಚಯಾಪಚಯ ಕ್ರಿಯೆ ಕುಂಠಿತಗೊಳ್ಳುತ್ತದೆ. ಇದರಿಂದ ಜೀರ್ಣಕ್ರಿಯೆ ಹದಗೆಡುವ ಸಾಧ್ಯತೆ ಇರುತ್ತದೆ. ಇದು ಅಜೀರ್ಣ, ಗ್ಯಾಸ್ ಮತ್ತು ಹೊಟ್ಟೆಯಲ್ಲಿ ಭಾರವಾದಂತಹ ಭಾವನೆ ಇತ್ಯಾದಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದಂತಹ ಈ ಸಮಸ್ಯೆಗಳು ದೀರ್ಘಕಾಲದವರೆಗೆ ಮುಂದುವರೆದರೆ, ಇದು ಹೊಟ್ಟೆ ಹುಣ್ಣುಗಳಂತಹ ಗಂಭೀರ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಇದೇ ಕಾರಣಕ್ಕಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ ಮಾಡುವುದು ಒಳ್ಳೆಯ ಅಭ್ಯಾಸವಲ್ಲ.
ತಜ್ಞರ ಪ್ರಕಾರ, ಬೆಳಗ್ಗೆ ಉಪಹಾರವನ್ನು ಸೇವಿಸಿದ 1 ರಿಂದ 2 ಗಂಟೆಗಳ ನಂತರ ಚಹಾ ಅಥವಾ ಕಾಫಿ ಕುಡಿಯಲು ಉತ್ತಮ ಸಮಯ. ಹೀಗಿದ್ದರೂ ನೀವು ಬೆಳಗ್ಗೆ ಬೇಗ ಚಹಾ ಕುಡಿಯಲು ಬಯಸಿದರೆ, ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು. ಬದಲಿಗೆ ಚಹಾದೊಂದಿಗೆ ಬಿಸ್ಕತ್ತು ಮತ್ತು ಇತರೆ ಉಪಹಾರವನ್ನು ಸೇವನೆ ಮಾಡುತ್ತಾ ಚಹಾ ಕುಡಿಯಬಹುದು. ಇದರಿಂದ ನಿರ್ಜಲೀಕರಣ, ಹೊಟ್ಟೆಯಲ್ಲಿ ಕಿರಿಕಿರಿ ಮತ್ತು ಆಮ್ಲೀಯತೆಯ ಸಮಸ್ಯೆಯನ್ನು ಕಡಿಮೆ ಮಾಡಬಹುದು.