ಗದಗ: ನಿನ್ನೆ ರಾತ್ರಿ ಪೊಲೀಸ್ ವಾಹನಕ್ಕೆ ಸ್ಕೂಟಿ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಯಶ್ ಅಭಿಮಾನಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಭಾನುವಾರ ರಾತ್ರಿ ಚಿತ್ರನಟ ಯಶ್ ಅವರ ಬರ್ತಡೇ ಬ್ಯಾನರ್ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದ ಅಭಿಮಾನಿಗಳ ಮನೆಗೆ ಭೇಟಿ ನೀಡಿ, ಜಿಮ್ಸ್ ಆಸ್ಪತ್ರೆಗೆ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿ ವಾಪಾಸು ಹೋಗುವಾಗ ಅವರ ವಾಹನ ಬೆನ್ನತ್ತಿ ಹೊರಟಿದ್ದ ಸ್ಕೂಟಿ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ನಿಖಿಲ್ ಗೌಡರ್(22) ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾನೆ.
ಮೃತ ನಿಖಿಲ್ ಲಕ್ಷ್ಮೇಶ್ವರ ತಾಲೂಕಿನ ಅಗಡಿ ಇಂಜನಿಯರಿಂಗ್ ಕಾಲೇಜಿನ ಫೈನಲ್ ಇಯರ್ ಓದುತ್ತಿದ್ದ ಎನ್ನಲಾಗಿದೆ. ನಿನ್ನೆ ಯಶ್ ನೋಡಲು ಸೂರಣಗಿ ಗ್ರಾಮಕ್ಕೂ ತೆರಳಿದ್ದ ಎನ್ನಲಾಗಿದೆ. ಆದರೆ ಅಲ್ಲೂ ಯಶ್ ನೋಡಲು ಆಗಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನೂ ಓದಿ ವಿದ್ಯುತ್ ಸ್ಪರ್ಶಿಸಿ ಮೂವರು ಯುವಕರು ಸಾವು, ಮೂವರು ಗಂಭೀರ; ಲಕ್ಷ್ಮೇಶ್ವರ ತಾಲೂಕಿನಲ್ಲಿ ದಾರುಣ ಘಟನೆ
ಮುಳಗುಂದ ರಸ್ತೆಯ ಪಿರಾಮಿಡ್‌ಗೆ ಹೋಗುವ ಕ್ರಾಸ್‌ನಲ್ಲಿ ಪೊಲೀಸ್ ವಾಹನ ಕಚೇರಿಗೆ ತೆರಳುವಾಗ ಸ್ಕೂಟಿ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿತ್ತು.
ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿತ್ತು. ತಕ್ಷಣವೇ ಪೊಲೀಸರೇ ತಮ್ಮ ವಾಹನದಲ್ಲಿ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಮಧ್ಯರಾತ್ರಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ 8ಗಂಟೆಗೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಗದಗ ಎಸ್ಪಿ ಬಿ.ಎಸ್. ನೇಮಗೌಡ ಗಾಯಾಳು ನಿಖಿಲ್ ಮೃತಪಟ್ಟ ಬಗ್ಗೆ ಮಾಹಿತಿ ನೀಡಿದ್ದು, ಅದು ಯಶ್ ಅವರ ಬೆಂಗಾವಲು ವಾಹನ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಗದಗ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.