ಲಾಲೂ ಪುತ್ರ ಸಿಎಂ ಅಭ್ಯರ್ಥಿ: ಮಿತ್ರಪಕ್ಷಗಳ ವಿರೋಧ? ದೇಶದ ಗಮನ ಸೆಳೆದಿರುವ ಬಿಹಾರ್ ಚುನಾವಣೆ

post advertise banner
Vijayasakshi (Gadag News) :

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಪಾಟ್ನಾ: ಬಿಹಾರ್ ವಿಧಾನಸಭೆಯ ಚುನಾವಣಾ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಶುಕ್ರವಾರ ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದ ನಂತರ, ಬಿಹಾರ್‌ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ.
ಅಲ್ಲೀಗ ಎನ್‌ಡಿಎ ಭಾಗವಾಗಿರುವ ಸಮಾಜವಾದಿ ಪಾರ್ಟಿಯ ನಿತೀಶ್‌ಕುಮಾರ್ ಅವರೇ ಈ ಸಲವೂ ಮುಖ್ಯಮಂತ್ರಿ ಅಭ್ಯರ್ಥಿ.  

ಅಲ್ಲಿನ ಪ್ರಮುಖ ವಿರೋಧ ಪಕ್ಷವಾಗಿರುವ ಆರ್‌ಜೆಡಿ, ಲಾಲ್ಲೂ ಪ್ರಸಾದ್ ಯಾದವ್‌ರ ಪುತ್ರ ತೇಜಸ್ವಿ ಯಾದವ್ ತನ್ನ ಸಿಎಂ ಅಭ್ಯರ್ಥಿ ಎಂದು ಘೋಷಿಸಿದೆ. ಆದರೆ, ಆರ್‌ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ/ಮಾಡಿಕೊಳ್ಳಲಿರುವ ಪಕ್ಷಗಳಿಗೆ ಇದು ಅಸಮಾಧಾನ ಮೂಡಿಸಿದೆ.
ರಾಷ್ಟ್ರೀಯ ಲೋಕ್ ಸಮತಾ ಪಾರ್ಟಿಯ ಉಪೇಂದ್ರ ಕುಶ್ವಾಹಾ, ತೇಜಸ್ವಿಯನ್ನು ನಾಯಕನೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಇತ್ತ ಮೈತ್ರಿಯ ಭಾಗವಾಗಿರುವ ಕಾಂಗ್ರೆಸ್ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಿದೆ. ‘ತನ್ನ ನಾಯಕನನ್ನು ಆರ್‌ಜೆಡಿ ಆಯ್ದುಕೊಂಡಿದೆ. ಅದು ಆ ಪಕ್ಷದ ವಿಷಯ. ಸಿಎಂ ಅಭ್ಯರ್ಥಿ ವಿಷಯ ಈಗ ಚರ್ಚೆಯಲ್ಲಿ ಇಲ್ಲ’ ಎಂದಿದೆ. ಈ ಕಡೆ ಎನ್‌ಡಿಎ ಮೈತ್ರಿಕೂಟ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರನ್ನೇ ಪ್ರಾಜೆಕ್ಟ್ ಮಾಡಿ ರಭಸದ ಪ್ರಚಾರ ಆರಂಭಿಸಿದೆ.


ಕೊರೋನಾ-ಲಾಕ್‌ಡೌನ್ ನಂತರ ನಡೆಯುತ್ತಿರುವ ಮಹತ್ವದ ಚುನಾವಣೆ ಇದಾಗಿದ್ದು, ಇದರ ಫಲಿತಾಂಶ ದೇಶದ ಮುಂದಿನ ರಾಜಕೀಯ ಆಗು-ಹೋಗುಗಳಿಗೆ ದಿಕ್ಸೂಚಿ ಆಗಬಹುದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಅಕ್ಟೋಬರ್ 28 ರಿಂದ ಚುನಾವಣೆ ಆರಂಭವಾಗಲಿದ್ದು 3 ಹಂತಗಳಲ್ಲಿ ನಡೆಯಲಿದೆ. ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ವಿಶ್ವಾದಾದ್ಯಂತ ಹರಡಿರುವ ಕೊರೋನಾ ವೈರಸ್ ಸಾಂಕ್ರಾಮಿಕದ ನಡುವೆಯು ನಡೆಯುತ್ತಿರುವ ಬಹುದೊಡ್ಡ  ಚುನಾವಣೆ ಇದಾಗಿದೆ. ಹಾಗಾಗಿ ಚುನಾವಣಾ ಆಯೋಗವು ಚುನಾವಣೆ ನಡೆಸಲು ಹಲವು ನಿಬಂಧನೆಗಳ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೊರೋನಾ ಪಾಸಿಟಿವ್ ಇರುವವರು ಸಹ ಮತದಾನ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.


ಬಿಹಾರ ಚುನಾವಣೆಗಾಗಿ 46 ಲಕ್ಷ ಮಾಸ್ಕ್ಗಳು, 23 ಲಕ್ಷ ಕೈಗವಸುಗಳು, 7 ಲಕ್ಷ ಲೀಟರ್ ಸ್ಯಾನಿಟೈಸರ್, 6 ಲಕ್ಷ ಪಿಪಿಇ ಕಿಟ್‌ಗಳನ್ನು ಬಳಸಲು ನಿರ್ಧಿರಿಸಲಾಗಿದೆ ಎಂದು ಸುನೀಲ್ ಅರೋರಾ ತಿಳಿಸಿದ್ದಾರೆ. ಆನ್‌ಲೈನ್‌ನಲ್ಲಿಯೂ ಸಹ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ.

ರಾಜ್ಯದ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಆಡಳಿತರೂಢ ಎನ್‌ಡಿಎ ಮತ್ತು ಮಹಾಮೈತ್ರಿ ನಡುವೆ ನೇರ ಹಣಾಹಣಿ ನಡೆಯಲಿದೆ. ಎನ್‌ಡಿಯ ಮೈತ್ರಿಕೂಟದಲ್ಲಿ ನಿತೀಶ್ ಕುಮಾರ್‌ರವರ ಜೆಡಿಯು, ಬಿಜೆಪಿ, ಚಿರಾಗ್ ಪಾಸ್ವಾನ್‌ರವರ ಎಲ್‌ಜೆಪಿ ಮತ್ತು ಜತಿನ್ ರಾಮ್ ಮಾಂಝಿಯವರ ಹಿಂದೂಸ್ತಾನ್ ಅವಮ್ ಮೋರ್ಚಾ ಸೇರಿವೆ. ಇದರ ಪ್ರತಿಸ್ಪರ್ಧಿ ಮಹಾಮೈತ್ರಿಯಲ್ಲಿ ಲಾಲು ಪ್ರಸಾದ್ ಯಾದವ್‌ರವರ ಆರ್‌ಜೆಡಿ, ಕಾಂಗ್ರೆಸ್ ಪ್ರಮುಖ ಪಕ್ಷಗಳಾಗಿವೆ.


ಸದ್ಯಕ್ಕೆ ಲಾಲು ಪ್ರಸಾದ್ ಯಾದವ್‌ರವರು ಜೈಲಿನಲ್ಲಿರುವ ಕಾರಣ ಅವರ ಮಗ ತೇಜಸ್ವಿ ಯಾದವ್ ಆರ್‌ಜೆಡಿ ಮತ್ತು ಮಹಾಮೈತ್ರಿಯನ್ನು ಮುನ್ನಡೆಸುತ್ತಿದ್ದಾರೆ. ನಿತೀಶ್ ಕುಮಾರ್‌ರವರು ಕೊರೋನಾ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿರುವ ಅವರು ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತ ವಿರೋಧಿ ಸರ್ಕಾರ ಎಂದು ಟೀಕಿಸಿದ್ದಾರೆ.

ಹಾಲಿ ಮುಖ್ಯಮಂತ್ರಿ ಜೆಡಿಯುನ ನಿತೀಶ್ ಕುಮಾರ್ ನಾಲ್ಕನೇ ಬಾರಿಗೆ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. 2015 ರಲ್ಲಿ ಆರ್‌ಜೆಡಿ, ಕಾಂಗ್ರೆಸ್ ಜೊತೆ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಜಯಿಸಿ ಸಿಎಂ ಆಗಿದ್ದ ಅವರು 2017 ರಲ್ಲಿ ಮೈತ್ರಿ ಮುರಿದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದಾರೆ.

ಸಿಎಎ ಮತ್ತು ಎನ್‌ಆರ್‌ಸಿ ಕಾರಣಕ್ಕೆ ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಚುನಾವಣಾ ಚತುರ ಎಂದೇ ಖ್ಯಾತಿಯಾದ ಪ್ರಶಾಂತ್ ಕಿಶೋರ್ ಬಿಹಾರದಲ್ಲಿ ಯುವಜನರನ್ನು ಸಂಘಟಿಸುತ್ತಿದ್ದಾರೆ. ಅದೇ ರೀತಿಯಾಗಿ ಕಳೆದ ಲೋಕಸಭೆಯಲ್ಲಿ ಸ್ಪರ್ಧಿಸಿ ಗಮನಸೆಳೆದಿದ್ದ ಸಿಪಿಐ ಪಕ್ಷದ ಯುವ ಮುಖಂಡ ಕನ್ಹಯ್ಯ ಕುಮಾರ್ ಸಹ ಈ ಚುನಾವಣೆಯಲ್ಲ ಪ್ರಮುಖ ಪಾತ್ರ ವಹಿಸಲಿದ್ದಾರೆ ಎನ್ನಲಾಗಿದೆ.

ಅದೇ ರೀತಿಯಾಗಿ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬಂದಿರುವ ಯುವ ದಲಿತ ಹೋರಾಟಗಾರ ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ಕೂಡ ‘ಅಜಾದ್ ಸಮಾಜ ಪಕ್ಷ’ ಸ್ಥಾಪಿಸಿದ್ದು, ಬಿಹಾರ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.

Leave A Reply

Your email address will not be published.