ಗಣಿತ ಕಬ್ಬಿಣದ ಕಡಲೆಯಲ್ಲ

0
sslc phone in program
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಗುರುವಾರ ನಡೆದ ನಾಲ್ಕನೇ ದಿನದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಫೋನ್ ಇನ್ ಕಾರ್ಯಕ್ರಮ ಹೆಚ್ಚು ಮಕ್ಕಳ ಭಾಗವಹಿಸುವಿಕೆಯೊಂದಿಗೆ ಯಶಸ್ವಿಯಾಯಿತು. ಗಣಿತ ವಿಷಯದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಕ್ಕಳು, ಉತ್ಸಾಹದಿಂದ ಭಾಗವಹಿಸಿ ಶಿಕ್ಷಕರಿಂದ ಪರಿಹಾರ ಕಂಡುಕೊಂಡರು.

Advertisement

ವಿದ್ಯಾರ್ಥಿಗಳು ಹೆಚ್ಚಾಗಿ ಅನ್ವಯಿಕ ಪ್ರಶ್ನೆಗಳು, ಓಜಿವ್ ರಚನೆ, ರೇಖಾತ್ಮಕ ನಕ್ಷೆ ರಚನೆ, ಸೂತ್ರಗಳನ್ನು ನೆನಪಿಟ್ಟುಕೊಳ್ಳುವ ಬಗೆ, ಘನಫಲಗಳ ವಿಸ್ತೀರ್ಣ, ತ್ರಿಕೋನಮಿತಿ ಮುಂತಾದವುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಪರಿಹಾರ ಪಡೆದುಕೊಂಡರು.

ಡಯಟ್ ಪ್ರಾಚಾರ್ಯ, ಉಪನಿರ್ದೇಶಕ (ಅಭಿವೃದ್ಧಿ) ಜಿ.ಎಲ್ ಬಾರಾಟಕ್ಕೆ ಮಾತನಾಡಿ, ಗಣಿತ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಭಯ ಮತ್ತು ಆತಂಕವಿರುತ್ತದೆ. ಆದರೆ ಗಣಿತ ಎನ್ನುವುದು ಮನುಷ್ಯನನ್ನು ಸದಾ ಚಟುವಟಿಕೆಯುಳ್ಳವನನ್ನಾಗಿ ಮಾಡುವ ಒಂದು ವಿಷಯವಾಗಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ನಿಖರವಾಗಿ ಅಂಕಗಳನ್ನು ತೆಗೆದುಕೊಳ್ಳುತ್ತೇನೆಂದು ಆತ್ಮವಿಶ್ವಾಸದಿಂದ ಹೇಳಬಹುದು. ಆದರೆ ಇತರೆ ವಿಷಯಗಳಲ್ಲಿ ಹಾಗಾಗದು. ಗಣಿತ ವಿಷಯದಲ್ಲಿ ಹಿಡಿತ ಸಾಧಿಸಿದವರು ಲೆಕ್ಕಾಚಾರದ ಜೀವನವನ್ನು ನಡೆಸಲು ಸಮರ್ಥರಾಗುತ್ತಾರೆ.

ವಿದ್ಯಾರ್ಥಿಗಳು ಗಣಿತ ವಿಷಯದ ಬಗ್ಗೆ ಅಸಡ್ಡೆ, ಅನಾದರ ತೋರಿಸದೇ ಆಸಕ್ತಿಯಿಂದ ಪ್ರಮೇಯಗಳನ್ನು, ಆಕೃತಿಗಳನ್ನು, ಬೀಜಗಣಿತದ ಸಮೀಕರಣಗಳನ್ನು ಬಿಡಿಸಿ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಈ ವಿಷಯ ಸಹಾಯಕಾರಿಯಾಗಿದೆ. ಗಣಿತ ಕಬ್ಬಿಣದ ಕಡಲೆಯಲ್ಲ, ಅದೊಂದು ಮನೋವಿಕಾಸದ ಆಟವಾಗಿದ್ದು, ಮಕ್ಕಳು ಹೆಚ್ಚಾಗಿ ಆಸಕ್ತಿಯಿಂದ ಗಣಿತ ವಿಷಯವನ್ನು ಕಲಿಯಬೇಕೆಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ವಿದ್ಯಾರ್ಥಿಗಳು ವರ್ಷದ ಪ್ರಾರಂಭದಿಂದ ಬರೆದ ವಿವಿಧ ಪರೀಕ್ಷೆಗಳಲ್ಲಿ ತಾವು ಬರೆಯಲು ಸಾಧ್ಯವಾಗದ, ತಪ್ಪು ಬರೆದ ಹಾಗೂ ಬರೆಯದೇ ಬಿಟ್ಟ ಪ್ರಶ್ನೆಗಳನ್ನು ತಮ್ಮ ಕೃತಿ ಸಂಪುಟದ ಉತ್ತರ ಪತ್ರಿಕೆಗಳಿಂದ ಗುರುತಿಸಿಕೊಂಡು ತೆರೆದ ಪುಸ್ತಕದ ಮಾದರಿಯಲ್ಲಿ ಅವುಗಳನ್ನು ಓದಿ ಮನನ ಮಾಡಿಕೊಳ್ಳುವಂತೆ ಹಾಗೂ ಶಿಕ್ಷಕರು ಕೂಡಾ ಇದೇ ಹಿನ್ನೆಲೆಯಲ್ಲಿ ಮಾರ್ಗದರ್ಶನ ಮಾಡುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ಶಿಕ್ಷಕರಾಗಿ ಸಿ.ಎಸ್ ಮಾನ್ವಿ, ವಿ.ಕೆ. ಪುರಾಣಿಕ, ಶರಣು ಗೌರಿ, ಜ್ಯೋತಿ ಶೆಟ್ಟರ, ಸಾದಿಯಾ ಬರ್ಜಿಸ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಹೆಚ್.ಎ. ಫಾರೂಕಿ, ಶಿಕ್ಷಣ ಸಂಯೋಜಕರಾದ ಶ್ಯಾಮ ಲಾಂಡೆ, ಐ.ಬಿ. ಮಡಿವಾಳರ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಪಿ.ಡಿ. ಮಂಗಳೂರ ಹಾಗೂ ತೋಂಟದಾರ್ಯ ಪ್ರೌಢಶಾಲೆಯ ಶಿಕ್ಷಕ ಕೆ.ಎಮ್. ಗೌಡರ ಹಾಗೂ ತೋಂಟದಾರ್ಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ನಾಗರಾಜ ಗಾಳಿ ಉಪಸ್ಥಿತರಿದ್ದರು.

ಫೋನ್ ಇನ್ ಕಾರ್ಯಕ್ರಮದಲ್ಲಷ್ಟೇ ಅಲ್ಲದೆ, ಪರೀಕ್ಷೆ ಪ್ರಾರಂಭವಾಗುವ ಹಿಂದಿನ ದಿನದವರೆಗೂ ಮಕ್ಕಳು ತಾವು ಓದುವಾಗ ಬರೆಯುವಾಗ ಏನಾದರೂ ಗೊಂದಲಗಳು ಅಥವಾ ಸಂದೇಹಗಳು ಹಾಗೂ ಸಮಸ್ಯೆಗಳು ಕಂಡು ಬಂದಲ್ಲಿ ಪ್ರತಿದಿನ ಸಾಯಂಕಾಲ ೫.೩೦ರಿಂದ ೬.೩೦ರ ಒಳಗೆ ಸಂಪನ್ಮೂಲ ಶಿಕ್ಷಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಸಂಪನ್ಮೂಲ ಶಿಕ್ಷಕರು ತಿಳಿಸಿದರು.


Spread the love

LEAVE A REPLY

Please enter your comment!
Please enter your name here