ಗುಣಾತ್ಮಕ ಬದಲಾವಣೆಯ ಪರ್ವ: ಸಚಿವ ಎಚ್.ಕೆ.ಪಾಟೀಲ

0
hkp
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಾಜ್ಯದ ೧೫ನೇ ಮುಂಗಡ ಪತ್ರವನ್ನು ಮಂಡಿಸಿರುವ ಸಿಎಂ ಸಿದ್ದರಾಮಯ್ಯನವರು ಕರ್ನಾಟಕ ಮಾದರಿ ಅಭಿವೃದ್ಧಿಯ ಹೊಸ ದೃಷ್ಟಾಂತವನ್ನು ರೂಪಿಸಿ, ಪುರೋಗಾಮಿ ಮುಂಗಡ ಪತ್ರವನ್ನು ರಾಜ್ಯಕ್ಕೆ ನೀಡಿ ಗುಣಾತ್ಮಕ ಬದಲಾವಣೆಯ ಪರ್ವವನ್ನು ಪ್ರಾರಂಭಿಸಿದ್ದಾರೆ ಎಂದು ಕಾನೂನು, ಪ್ರವಾಸೋದ್ಯಮ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

Advertisement

ರಾಜ್ಯದ ೧.೨ ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲಕ್ಕೆತ್ತಿ, ಕೆಳ ಮಧ್ಯಮ ವರ್ಗ ಮತ್ತು ಮಧ್ಯಮ ವರ್ಗದ ಮಟ್ಟಕ್ಕೆ ತಂದು ನಿಲ್ಲಿಸಿ, ಸರ್ವೋದಯ ಸಮಾಜದ ಕಲ್ಪನೆಯನ್ನು ಯಥಾವತ್ತಾಗಿ ನೈಜ ರೂಪದಲ್ಲಿ ಅನುಷ್ಠಾನಗೊಳಿಸುವ ಗ್ಯಾರಂಟಿ ಯೋಜನೆಗಳು ಫಲ ನೀಡಲಾರಂಭಿಸಿದ್ದು ಶ್ಲಾಘನೀಯ ಬೆಳವಣಿಗೆಯಾಗಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳು ಪ್ರಶಂಸೆಗೆ ಪಾತ್ರವಾಗಿರುವುದರಿಂದ ದಕ್ಷ ಮತ್ತು ಸಂಕಲ್ಪ ಶಕ್ತಿಯುಳ್ಳ ಕರ್ನಾಟಕ ಸರ್ಕಾರದ ಪ್ರಯತ್ನಗಳು ಕೈಗೂಡಿವೆ.

ವಿರೋಧ ಪಕ್ಷಗಳ ಟೀಕೆಗೆ ಸರ್ಕಾರದ ಗ್ಯಾರಂಟಿಗಳ ಪರಿಣಾಮಕಾರಿ ಅನುಷ್ಠಾನವೇ ಗ್ಯಾರಂಟಿಯಾಗಿದೆ.

ಗದಗ ಜಿಲ್ಲೆಯ ಜಾಲವಾಡಗಿ ಏತ ನೀರಾವರಿಯನ್ನು ರೂ.೭.೨೮ ಕೋಟಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲು, ಶಿರಹಟ್ಟಿ ತಾಲ್ಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು, ಗದಗ ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ರೂ.೧೦.೦೦ ಕೋಟಿ ವೆಚ್ಚದಲ್ಲಿ ಕ್ಯಾತಲ್ಯಾಬ್ ಸೌಲಭ್ಯದೊಂದಿಗೆ ಸೂಪರ್ ಸ್ಪೇಷಾಲಿಟಿ ಕಾರ್ಡಿಯಾಕ್ ಯೂನಿಟ್ (Super Speciality Cardiac Unit) ಸ್ಥಾಪಿಸುವ ನಿರ್ಣಯ, ಗದಗದಲ್ಲಿ ೪೫೦ ಹಾಸಿಗೆಯ ಆಸ್ಪತ್ರೆಗೆ ವೈದ್ಯಕೀಯ ಉಪಕರಣ
ಮತ್ತು ಪೀಠೋಪಕರಣ ಖರೀದಿಗೆ ಹಣ ಒದಗಿಸಿರುವುದು, ಗದಗದಲ್ಲಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲು ನಿರ್ಣಯಿಸಲಾಗಿರುವುದು, ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ ಉತ್ತೇಜಿಸಿರುವುದು, ಗದಗ ಜಿಲ್ಲೆಯ ರೋಣದಲ್ಲಿ ನಬಾರ್ಡ್ ಸಹಯೋಗದೊಂದಿಗೆ ಹೊಸ ಜಿ.ಟಿ.ಟಿ.ಸಿ ಪ್ರಾರಂಭಿಸುವ ಮೂಲಕ, ರೋಣದ ಮಲ್ಲಾಪುರ ರೈಲ್ವೆ ಮೇಲುಸೇತುವೆ ಕಾಮಗಾರಿ ಘೋಷಿಸಿರುವುದು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ವದ ಮತ್ತು ಪರಿಣಾಮಕಾರಿಯಾದ ಅಭಿವೃದ್ಧಿಯ ಶಕೆಯನ್ನು ಪುನರಾರಂಭಿಸುವ ದಿಕ್ಸೂಚಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಮುಂಗಡ ಪತ್ರದಲ್ಲಿ ಎಲ್ಲಾ ವರ್ಗಗಳ, ಎಲ್ಲಾ ವಲಯಗಳ, ಎಲ್ಲಾ ಭೌಗೋಳಿಕ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಯನ್ನು ಪ್ರತಿಪಾದಿಸುವ ಪರಿಣಾಮಕಾರಿ ಅರ್ಥವ್ಯವಸ್ಥೆಯನ್ನು ಅನಾವರಣಗೊಳಿಸಲಾಗಿದೆ. ಗದಗ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೂ.೧೦.೦೦ ಕೋಟಿಗಳ ವೆಚ್ಚದ ಶೀತಲ ಗೃಹ ನಿರ್ಮಾಣ ಮಾಡುವ ಮೂಲಕ ಹಣ್ಣು-ತರಕಾರಿ ಮಾರುಕಟ್ಟೆಗೆ ದೊಡ್ಡ ಬೆಂಬಲ ದೊರಕಲಿದೆ. ಈ ಅಭಿವೃದ್ಧಿಪರ ಮುಂಗಡ ಪತ್ರವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ.
ಎಚ್.ಕೆ. ಪಾಟೀಲ.
ಕಾನೂನು, ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವರು.


Spread the love

LEAVE A REPLY

Please enter your comment!
Please enter your name here