ಭಾವೈಕ್ಯತೆಯೆಂಬುದು ಯಾರೇ ಒಬ್ಬ ವ್ಯಕ್ತಿಗೆ ಸೀಮಿತವಲ್ಲ

0
bhavaikyata dina
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ತೋಂಟದಾರ್ಯ ಮಠ ಮತ್ತು ಶಿರಹಟ್ಟಿಯ ಫಕೀರೇಶ್ವರ ಮಠಗಳೆರಡೂ ಗದಗ ಜಿಲ್ಲೆಯ ಎರಡು ಪ್ರಮುಖ ಮಠಗಳು. ಎರಡೂ ಪೀಠ ತಮ್ಮದೇ ಆದ ಅಸಂಖ್ಯಾತ ಭಕ್ತ ಸಮೂಹವನ್ನು ಹೊಂದಿವೆ. ಇದೀಗ, ತೋಂಟದ ಸಿದ್ದಲಿಂಗ ಶ್ರೀಗಳ ೭೫ನೇ ಜಯಂತಿಯನ್ನು `ಭಾವೈಕ್ಯತಾ ದಿನ’ವನ್ನಾಗಿ ಆಚರಿಸುತ್ತಿರುವುದಕ್ಕೆ ಫಕೀರೇಶ್ವರ ಮಠದ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿರುವುದು ಎರಡೂ ಮಠಗಳ ಭಕ್ತರ ನಡುವಿನ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ಬರುವ ಫೆ.೨೧ರಂದು ಸಿದ್ದಲಿಂಗ ಸ್ವಾಮೀಜಿಗಳ ೭೫ನೇ ಜಯಂತಿಯನ್ನು `ಭಾವೈಕ್ಯತಾ ದಿನ’ ಎಂಬ ಹೆಸರಿನೊಂದಿಗೆ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ದಿನವನ್ನು `ಭಾವೈಕ್ಯತಾ ದಿನ’ ಎಂಬ ಹೆಸರಿನೊಂದಿಗೆ ಆಚರಿಸಿದರೆ ಶಿರಹಟ್ಟಿ ಮಠದ ಭಕ್ತರಿಂದ ಈ ದಿನವನ್ನು `ಕರಾಳ ದಿನ’ ಎಂದು ಆಚರಿಸುತ್ತೇವೆ ಎಂದು ಜ.ಫಕೀರ ದಿಂಗಾಲೇಶ್ವರ ಶ್ರೀಗಳು ತಿಳಿಸಿದ್ದರು. ಭಾವೈಕ್ಯತೆಯ ಪರಂಪರೆ ಶಿರಹಟ್ಟಿಯ ಫಕೀರೇಶ್ವರ ಮಠದ್ದಾಗಿದೆ. ಲಿಂಗೈಕ್ಯ ಡಾ. ಸಿದ್ದಲಿಂಗ ಸ್ವಾಮೀಜಿಯವರಿಗೆ `ಭಾವೈಕ್ಯತೆಯ ಹರಿಕಾರ’ ಎಂಬುದು ಅನ್ವಯವಾಗುವದಿಲ್ಲ. ಹೀಗಾಗಿ, ಭಾವೈಕ್ಯತಾ ಹರಿಕಾರ ಎನ್ನುವ ಪದವನ್ನು ಬಳಕೆ ಮಾಡಬಾರದು.

ನಮ್ಮ ಮನವಿಗೆ ಸ್ಪಂದಿಸದಿದ್ದರೆ ತೋಂಟದಾರ್ಯ ಮಠದ ಬೀದಿಯಲ್ಲಿ ಬೃಹತ್ ಹೋರಾಟ ನಡೆಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ, ಗೃಹ ಸಚಿವರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇವೆ ಎಂದೂ ದಿಂಗಾಲೇಶ್ವರ ಶ್ರೀಗಳು ತಿಳಿಸಿದ್ದರು.

ಈ ಕುರಿತು ಸೋಮವಾರ ಸಂಜೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ತೋಂಟದ ಸಿದ್ದರಾಮ ಶ್ರೀಗಳು, ಭಾವೈಕ್ಯತೆಯೆಂಬುದು ಯಾರೇ ಒಬ್ಬ ವ್ಯಕ್ತಿಗೆ ಸೀಮಿತವಲ್ಲ. ದಿಂಗಾಲೇಶ್ವರ ಶ್ರೀಗಳು ಕರಾಳ ದಿನ ಆಚರಣೆ ಮಾಡಿದ್ದಾದರೆ, ಅದನ್ನು ಜಿಲ್ಲಾಡಳಿತ ನೋಡಿಕೊಳ್ಳುತ್ತದೆ. ಕರಾಳ ದಿನ ಆಚರಣೆ ತಪ್ಪಾದರೆ ಸರ್ಕಾರ ಇದನ್ನು ನಿಷೇಧಿಸಲಿ ಅಥವಾ ನಮಗೆ ನಿರ್ದೇಶನ ನೀಡಲಿ. ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇವೆ ಎಂದರು.

bhavaikyata dina

ತೋಂಟದಾರ್ಯ ಮಠದಲ್ಲಿ ಸಾಕಷ್ಟು ಸಾಮರಸ್ಯ ಬೆಸೆಯುವ ಕೆಲಸ ಮಾಡಿದ್ದೇವೆ. ಜಾತ್ರಾ ಕಮಿಟಿಗೆ ಮುಸ್ಲಿಂರನ್ನು ಆಯ್ಕೆ ಮಾಡಿದ ಉದಾಹರಣೆಗಳಿವೆ. ಮಸೀದಿಗಳಿಗೆ ಮಠದ ಜಾಗ ಬಿಟ್ಟು ಕೊಟ್ಟಿದ್ದೇವೆ. ಮಠದಲ್ಲಿ ಅಲ್ಲಾಹುವನ್ನು, ಮಸೀದಿಯಲ್ಲಿ ಸಿದ್ಧಲಿಂಗನನ್ನು ಕಾಣಬೇಕೆಂದು ಶ್ರೀಗಳು ಹೇಳುತ್ತಿದ್ದರು. ಮಠಕ್ಕೆ ಅನೇಕ ಮುಸ್ಲಿಂ ಭಕ್ತರು ನಡೆದುಕೊಳ್ಳುತ್ತಿದ್ದಾರೆ. ಲಿಂ. ಸಿದ್ಧಲಿಂಗ ಶ್ರೀಗಳು ಎಲ್ಲ ಸಮುದಾಯಗಳೊಂದಿಗೂ ಭಾವೈಕ್ಯತೆಯಿಂದಿದ್ದರು. ಸಿದ್ಧಲಿಂಗ ಶ್ರೀಗಳ ಮೇಲೆ ವೃಥಾ ಆರೋಪ ಹೊರಿಸುವುದು ಸರಿಯಲ್ಲ. ನಮ್ಮ ಕಾಯಕ ನಮ್ಮ ಜೊತೆಗಿರಲಿ ಎಂದರು.

ಈ ನಡುವೆ ಉಭಯ ಶ್ರೀಗಳು ತಮ್ಮ ಮಠದ ಭಕ್ತರೊಂದಿಗೆ ಸಭೆಯನ್ನೂ ನಡೆಸಿದ್ದು, ಭಕ್ತರ ವತಿಯಿಂದಲೂ ಜಿಲ್ಲಾಡಳಿತ, ಸರ್ಕಾರಕ್ಕೆ ಪರ-ವಿರೋಧವಾಗಿ ಮನವಿಗಳು ಸಲ್ಲಿಕೆಯಾಗುತ್ತಿವೆ.

ವೀರಶೈವ ಲಿಂಗಾಯತ ಧರ್ಮವನ್ನು ಸಿದ್ಧಲಿಂಗ ಶ್ರೀಗಳು ಒಡೆದಿದ್ದಾರೆ ಎಂಬ ದಿಂಗಾಲೇಶ್ವರ ಶ್ರೀಗಳ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮ ಶ್ರೀಗಳು, ವೀರಶೈವ ಎಂಬುದು ಲಿಂಗಾಯತದ ಒಂದು ಭಾಗ. ೧೨ನೇ ಶತಮಾನದಿಂದಲೂ ಲಿಂಗಾಯತ ಧರ್ಮವಿದೆ. ಅದನ್ನು ಒಡೆಯುವ ಪ್ರಮೇಯವೇ ಇಲ್ಲ. ಪ್ರತ್ಯೇಕ ಧರ್ಮ ಹೋರಾಟ ತಟಸ್ಥವಾದುದರ ಹಿಂದೆ ರಾಜಕಾರಣಿಗಳ ಹೊರಳಾಟವಿದೆ. ರಾಜಕಾರಣಿಗಳಿಗೆ ಮತ ಮುಖ್ಯವೇ ಹೊರತು ಸಿದ್ಧಾಂತವಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ.
– ತೋಂಟದ ಸಿದ್ದರಾಮ ಶ್ರೀಗಳು.


Spread the love

LEAVE A REPLY

Please enter your comment!
Please enter your name here