ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಬಾಗಲಕೋಟೆ ಜಿಲ್ಲೆ ಕಲಾದಗಿ ಮಾರ್ಗವಾಗಿ ಉದಲಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಜಗದ್ಗುರುಗಳ ಮೇಲೆ ನಡೆದ ಚಪ್ಪಲಿ ಎಸೆತದ ಘಟನೆ ನಾಡಿನ ಭಕ್ತ ಕುಲಕೋಟಿ ಮತ್ತು ಹರಗುರು-ಚರಮೂರ್ತಿಗಳ ಪರವಾಗಿ ಖಂಡಿಸುತ್ತೇವೆ ಎಂದು ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರು, ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಅವರು ಈ ಕುರಿತು ಸೋಮವಾರ ಲಕ್ಷ್ಮೇಶ್ವರದಲ್ಲಿ ಮಾತನಾಡಿ, `ಮಾನವ ಧರ್ಮಕ್ಕೆ ಜಯವಾಗಲಿ-ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ವಿಶ್ವಮಾನವ ಸಂದೇಶದೊಂದಿಗೆ ಧರ್ಮಪ್ರವರ್ತಕರಾಗಿ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ನಾಡಿನಾದ್ಯಂತ ಹಗಲೂ-ರಾತ್ರಿ ಸಂಚರಿಸುತ್ತಾರೆ. ಎಲ್ಲ ಜಾತಿ, ಜನಾಂಗದವರಿಂದ ಜಾತ್ಯಾತೀತವಾಗಿ ಗೌರವಿಸಲ್ಪಡುವ ರಂಭಾಪುರಿ ಜಗದ್ಗುರುಗಳ ವಿರುದ್ಧ ನಡೆಸಿದ ಅನಾಗರಿಕ ಘಟನೆ ನಾಡಿನ ಶ್ರೀಗಳ ಮತ್ತು ಭಕ್ತರ ಮನಸ್ಸಿಗೆ ತೀವ್ರ ನೋವನ್ನುಂಟುಮಾಡಿದೆ. ಕಲಾದಗಿ ಶ್ರೀಮಠದ ಉತ್ತರಾಧಿಕಾರದ ವಿವಾಹ ಪ್ರಕರಣ ಇನ್ನೂ ಕೋರ್ಟ್ನಲ್ಲಿದೆ. ಸಮಾಜದ ಶಾಂತಿಗಾಗಿ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಂಡು ಹೋಗಬೇಕೆಂಬ ಆದೇಶವಿದ್ದರೂ ಇದಕ್ಕೆ ವ್ಯತಿರಿಕ್ತವಾಗಿ ದುಷ್ಕೃತ್ಯ ನಡೆಸಿರುವುದು ಖಂಡನೀಯ. ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಈ ವೇಳೆ ಆನಂದ ಮೆಕ್ಕಿ, ಎಸ್.ಪಿ. ಬಳಿಗಾರ, ಕುಬೇರಪ್ಪ ಮಹಾಂತಶೆಟ್ಟರ, ರುದ್ರಸ್ವಾಮಿ ಘಂಟಾಮಠ, ಶ್ರೀಕಾಂತ ರೋಣದ, ಗಂಗಾಧರ ಮೆಣಸಿನಕಾಯಿ, ನಿಂಗಪ್ಪ ಬನ್ನಿ, ವೀರಣ್ಣ ಪವಾಡದ, ಎಂ.ಆರ್. ಪಾಟೀಲ, ವಿಜಯಕುಮಾರ ಹತ್ತಿಕಾಳ, ಚಂಬಣ್ಣ ಬಾಳಿಕಾಯಿ, ವಿರೂಪಾಕ್ಷಪ್ಪ ಆದಿ, ಶೇಖಪ್ಪ ಹುರಕಡ್ಲಿ, ಅಶೋಕ ಬಟಗುರ್ಕಿ, ಜಾಕೀರಹುಸೇನ ಹವಾಲ್ದಾರ, ಬಂಗಾರೆಪ್ಪ ಮುಳಗುಂದ, ಸೋಮನಗೌಡ ಪಾಟೀಲ, ಸುರೇಶ ರಾಚನಾಯ್ಕರ ಸೇರಿದಂತೆ ನೂರಾರು ಜನರು ಹಾಜರಿದ್ದರು.
ಈ ವೇಳೆ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮತ್ತು ಜಿ.ಎಸ್. ಗಡ್ಡದೇವರಮಠ ಮಾತನಾಡಿ, ರಂಭಾಪುರಿ ಜಗದ್ಗುರುಗಳ ಮೇಲೆ ನಡೆಸಿದ ಹೀನಕೃತ್ಯ ಖಂಡನೀಯ. ಈ ಘಟನೆಯಲ್ಲಿ ಪ್ರತ್ಯಕ್ಷ-ಪರೋಕ್ಷವಾಗಿ ಕಾರಣೀಕರ್ತರಾದವರನ್ನು ಪತ್ತೆ ಮಾಡಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಜಗದ್ಗುರುಗಳು ಈ ಕೃತ್ಯದಿಂದ ಧೃತಿಗೆಡದೇ ಧರ್ಮ, ಸಂಸ್ಕೃತಿ ಕಾಪಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿ. ಅವರೊಂದಿಗೆ ಜಾತ್ಯಾತೀತವಾಗಿ ನಾಡಿನ ಎಲ್ಲ ಭಕ್ತಸಮೂಹವಿದೆ ಎಂದರು.