ಮೊಗ್ಗಿನ ಮನಸಿನ ಮುಗ್ಧತೆಯ ಪದ್ಯಗಳು

0
sakshi padyagalu
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮಕ್ಕಳು ಬಾಲ್ಯದಲ್ಲಿ ಸಾಕಷ್ಟು ಅನುಭವಗಳ ಮೂಟೆಯನ್ನು ಹೊತ್ತುಕೊಂಡು ಸಾಗುತ್ತಾರೆ. ಸೂಕ್ತ ಅವಕಾಶ ಮತ್ತು ಪ್ರೋತ್ಸಾಹ ದೊರೆತಾಗ ಮೌಖಿಕ ಮತ್ತು ಲಿಖಿತ ಅಭಿವ್ಯಕ್ತಿಯಾಗಿ ಹೊರಹೊಮ್ಮುತ್ತದೆ. ಈ ದಿಸೆಯಲ್ಲಿ ಸಾಕ್ಷಿ ದೇವರಡ್ಡಿ ತನ್ನ ಅನುಭವಗಳನ್ನು ಪುಟ್ಟ ಪುಟ್ಟ ಪದ್ಯದಲ್ಲಿ ಹೂರಣವಾಗಿ ತುಂಬಿ ಪದಗಳ ತೋರಣ ಕಟ್ಟಿದ್ದಾಳೆ. ಮೊಗ್ಗಿನ ಮನಸಿನ ಮುಗ್ಧತೆಯು ಹೂಗನಸಿನ ಪದ್ಯಗಳಿಗೆ ಸಾಕ್ಷಿಯಾಗಿದೆ ಎಂದು ಧಾರವಾಡ ಆಕಾಶವಾಣಿಯ ಮುಖ್ಯಸ್ಥ ಬಸು ಬೇವಿನಗಿಡದ ನುಡಿದರು.

Advertisement

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ಹಾಗೂ ಚಿಲಿಪಿಲಿ ಪ್ರಕಾಶನ ಧಾರವಾಡದಿಂದ ತೋಂಟದ ಗದುಗಿನ ಸಿದ್ಧಲಿಂಗಶ್ರೀಗಳ ಕನ್ನಡ ಭವನದಲ್ಲಿ ಜರುಗಿದ ಕುಮಾರಿ ಸಾಕ್ಷಿ ರವಿ ದೇವರಡ್ಡಿ ಅವರ ‘ಸಾಕ್ಷಿ ಪದ್ಯಗಳು’ ಕೃತಿಯ ಲೋಕಾರ್ಪಣೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಸಾಕ್ಷಿಯ ಕವಿತೆಗಳು ಮಕ್ಕಳ ಆಲೋಚನೆಯ ಪ್ರತಿನಿಧಿಯಾಗಿವೆ. ಇಂದಿನ ಕಾನ್ವೆಂಟ್ ಸಂಸ್ಕೃತಿಯ ಶಿಕ್ಷಣ ಮಕ್ಕಳ ಬಾಲ್ಯವನ್ನು ಕಿತ್ತು ತಿನ್ನುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಮಗು ಒಂದಿಷ್ಟು ತಿಳುವಳಿಕೆ ಬಂದ ನಂತರ ಕಾಣುವ, ನೋಡುವ, ಸ್ಪರ್ಶಿಸುವ, ಅನುಭವಿಸುವ ತನ್ನದೇ ಆದ ಭಾವನೆಗಳನ್ನು ವ್ಯಕ್ತಪಡಿಸುವುದು ಸಹಜ. ಅವುಗಳನ್ನು ಅಕ್ಷರ ರೂಪಕ್ಕೆ ಇಳಿಸಿದಾಗ ಸಿಗುವ ನೋಟವೇ ಸಾಕ್ಷಿ ಪದ್ಯಗಳು. ಥೇಟ್ ಆಗತಾನೆ ಹೊಲದಿಂದ ಕಿತ್ತು ತಂದ ಸಾವಯವ ತಾಜಾ ತರಕಾರಿ ತಿಂದ ಅನುಭವ ಓದುಗನಿಗೆ ಆಗುವುದು.

ಅಪರೂಪದ ಪ್ರತಿಭೆ ಸಾಕ್ಷಿ ಇಂಥ ಪ್ರತಿಭೆಯ ಪುಟ್ಟ ಕೃತಿಯನ್ನು ಚಿಲಿಪಿಲಿ ಪ್ರಕಾಶನ ಹೆಮ್ಮೆಯಿಂದ ಪ್ರಕಟಿಸಿ ನಿಮ್ಮ ಕೈಗೆ ಇಟ್ಟಿದೆಯೆಂದರು.

ಮಕ್ಕಳ ಸಾಹಿತಿ ನಾಗರಾಜ ಹುಡೇದ ಸಾಕ್ಷಿ ಪದ್ಯಗಳ ಪುಸ್ತಕಾವಲೋಕನ ಮಾಡಿ, ಸಾಕ್ಷಿ ಗೀಚಿದ ಚಿತ್ರಗಳಿಂದ ಸಾಹಿತ್ಯ ಹೊರಹೊಮ್ಮಿದೆ. ಅಭಿವ್ಯಕ್ತಿಗೆ ಮಾಧ್ಯಮವಾಗಿ ಚಿತ್ರಗಳನ್ನು ಬಳಸಿಕೊಂಡು ನಂತರ ಮಾತು ಬಂದಾಗ ಅಕ್ಷರ ರೂಪಕ್ಕೆ ಇಳಿಸಿ ರಚಿಸಿದ ಪದ್ಯಗಳು ಇವಾಗಿವೆಯೆಂದರು.

ಕು. ಸಾಕ್ಷಿ ಮಾತನಾಡಿ, ನಾನು ಶಾಲೆಯಿಂದ ಮನೆಗೆ ಬಂದಾಗ ನನ್ನ ಅಪ್ಪ-ಅಮ್ಮ ಇವತ್ತ ಶಾಲೆಯಲ್ಲಿ ಯಾವ ಆಟ ಆಡಿದಿ, ಹೊಸ ಕಥೆ, ಹಾಡು ಶಾಲೆಯಲ್ಲಿ ಹೇಳಿದರಾ ಎಂದು ಕೇಳುತ್ತಿದ್ದರು. ನಾನು ಹೇಳುತ್ತ ಹೋಗುತ್ತಿದ್ದೆ. ಗುಬ್ಬಚ್ಚಿ ಗೂಡು, ಸುಧಾ ಪತ್ರಿಕೆ ಓದುವುದನ್ನ ರೂಢಿ ಮಾಡಿಕೊಂಡೆ. ಹಾಗೆ ಚಿತ್ರ, ಕವಿತೆ ಬರೆಯುತ್ತಿದ್ದೆ. ಅವೆಲ್ಲವೂ ಕೂಡಿಸಿ ಪುಸ್ತಕ ಮಾಡಿದೆ ಎಂದು ತನ್ನ ಮಾತುಗಳಲ್ಲಿ ಹೇಳಿದಳು.

ಸಾಕ್ಷಿ ಪದ್ಯಗಳ ಕಾರ್ಯಕ್ರಮ ಕುರಿತು ಸಂತೋಷ ಅಂಗಡಿ ಹಾಗೂ ರವಿ ದೇವರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರೊ. ಚಂದ್ರಶೇಖರ ವಸ್ತçದ, ಪ್ರೊ. ಕೆ.ಎಚ್. ಬೇಲೂರ, ಪ್ರೊ.ಅನ್ನದಾನಿ ಹಿರೇಮಠ, ಡಿ.ಎಸ್. ಬಾಪುರೆ, ಬಸವರಾಜ ಗಣಪ್ಪನವರ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಡಾ. ರಾಜಶೇಖರ ದಾನರಡ್ಡಿ, ರಾಜೇಂದ್ರ ಬರದ್ವಾಡ, ಶ್ರೀಕಾಂತ ಬಡ್ಡೂರ, ಕಿಶೋರಬಾಬು ನಾಗರಕಟ್ಟಿ, ಡಾ. ರಾಜೇಂದ್ರ ಗಡಾದ, ಸಿ.ಕೆ.ಎಚ್.ಶಾಸ್ತಿç(ಕಡಣಿ), ಈರನಗೌಡ ಮಣಕವಾಡ, ಎ.ಎಸ್.ಮಕಾನದಾರ, ಅನಂತಮೋಹನ ಭಟ್, ಜಯದೇವ ಭಟ್, ಅಜಿತ ಘೋರ್ಪq,ೆ ಸುರೇಶ ಕುಂಬಾರ, ಆರ್.ಡಿ. ಕಪ್ಪಲಿ, ಪ್ರ.ತೊ. ನಾರಾಯಣಪುರ, ಬಿ.ಎಸ್ ಹಿಂಡಿ, ರತ್ನಕ್ಕ ಪಾಟೀಲ, ಪ್ರೊ. ಶಕುಂತಲಾ ಸಿಂಧೂರ, ಜ್ಯೋತಿ ಹೇರಲಗಿ, ಶಿಲ್ಪಾ ಮ್ಯಾಗೇರಿ, ಆರ್.ವಿ. ಮ್ಯಾಗೇರಿ, ಗೀತಾ ಬಂಡಿ, ಶಾರದಾ ಬಾಣದ, ನೀಲಮ್ಮ ಅಂಗಡಿ, ಯು.ಎಸ್. ಕಣವಿ, ರಕ್ಷಿತಾ ಎಸ್.ಗಿಡ್ನಂದಿ, ಅನಸೂಯಾ ಮಿಟ್ಟಿ, ಎಂ.ಎಚ್. ಸವದತ್ತಿ, ಸಿ.ಎಂ. ಮಾರನಬಸರಿ, ಶಂಕರಗೌಡ ಪಾಟೀಲ, ಅಶೋಕ ಸತರೆಡ್ಡಿ, ಷಡಕ್ಷರಿ ಮೆಣಸಿನಕಾಯಿ, ಎಚ್.ಟಿ. ಸಂಜೀವಸ್ವಾಮಿ, ಎಂ.ಎಸ್. ಅಸುಂಡಿ, ಕೊಟ್ರೇಶ ಜವಳಿ, ಕಳಕಪ್ಪ ಜಲ್ಲಿಗೇರಿ, ಆಯ್.ವಾಯ್. ಸಾಳೆರ, ವಾಸಪ್ಪ ಸಾಳೆರ, ಗೀತಾ ಲಿಂ.ಪಾಟೀಲ, ರಾಜು ದಿಂಡೂರ, ರಾಜಶೇಖರ ಕರಡಿ, ಎಚ್.ವಿ. ಮಳಲಿ, ಡಾ. ಎ.ಎಲ್. ದೇಸಾಯಿ, ಎಸ್.ವಿ. ಕುಂದಗೋಳ, ಬಸವರಾಜ ವಾರಿ, ಡಾ. ಲಿಂಗಯ್ಯ ಅರವಟಗಿಮಠ, ಲಿಂಗರಾಜ ಪಾಟೀಲ, ನಿರ್ಮಲಾ ಪಾಟೀಲ, ಆರ್.ಎಸ್. ಕುಂದಗೋಳ, ಅಮರೇಶ ರಾಂಪುರ ಉಪಸ್ಥಿತರಿದ್ದರು.

ನೇತ್ರಾ ಬಂಡಿ ಪ್ರಾರ್ಥಿಸಿದರು. ಸೌಮ್ಯ ಬೈಲಪ್ಪನವರ ನಿರೂಪಿಸಿದರು. ಗೌರವ ಕಾರ್ಯದರ್ಶಿ ಶಿವಾನಂದ ಗಿಡ್ನಂದಿ ಸ್ವಾಗತಿಸಿದರು. ಶಿಕ್ಷಕ ಪಿ.ಟಿ. ಬೈಲಪ್ಪನವರ ವಂದಿಸಿದರು.

ಡೋಣಿಯ ನಂದಿವೇರಿ ಸಂಸ್ಥಾನಮಠದ ಪೂಜ್ಯ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತ, ಕಾವ್ಯ ಕಟ್ಟುವುದು ವ್ಯಕ್ತಿಯ ಮನಸ್ಸಿನ ಅಗಾಧತೆಯಾಗಿದ್ದು, ಸಂಸ್ಕಾರ ಹೊಂದಿ ಅಕ್ಷರ ರೂಪವನ್ನು ತಾಳಿ ಲಾಲಿತ್ಯವನ್ನು ಪಡೆಯುತ್ತದೆ. ಮನಸ್ಸು ಸೃಜನಶೀಲವಾಗಿದ್ದರೆ ಕಾವ್ಯ ಹುಟ್ಟುತ್ತದೆ. ನಮ್ಮ ಮನೆಗಳಲ್ಲಿ ಪುಸ್ತಕದ ವಾತಾವರಣ ತುಂಬ ಕಡಿಮೆಯಾಗಿದೆ. ದೃಶ್ಯ ಮಾಧ್ಯಮದ ಭರಾಟೆಯಲ್ಲಿ ಪುಸ್ತಕಗಳು ಕಳೆದುಹೋಗುತ್ತಿವೆ. ಮಕ್ಕಳು ಓದುವ ಹವ್ಯಾಸದಿಂದ ದೂರವಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಮಕ್ಕಳು ಮೂಲತಃ ಸೃಜನಶೀಲರು. ಸೂಕ್ತ ಮಾರ್ಗದರ್ಶನ ಮತ್ತು ಅವಕಾಶಗಳು ಮಕ್ಕಳನ್ನು ಸೃಜನಶೀಲವಾಗಿಸಬಲ್ಲವು. ಆದರೆ ಶಾಲೆಗಳಿಂದು ಅಂಕ ಗಳಿಕೆಯ ತಾಣಗಳಾಗಿವೆ. ಮಕ್ಕಳ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಶಾಲೆ ಮತ್ತು ಮನೆ ಒದಗಿಸಬೇಕೆಂದರು.


Spread the love

LEAVE A REPLY

Please enter your comment!
Please enter your name here