ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಕಾಡಿನಲ್ಲಿ ಲಕ್ಷಾಂತರ ಜೀವರಾಶಿಗಳು ವಾಸಿಸುತ್ತಿದ್ದು, ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಬೇಸಿಗೆಯಲ್ಲಿ ಕಾಡಿನ ಪ್ರಾಣಿ-ಪಕ್ಷಿಗಳು ನೀರನ್ನು ಅರಸಿ ಹೊಲ-ಗದ್ದೆಗಳು, ಜಲಮೂಲಗಳ ಬಳಿ ಬರುತ್ತವೆ. ಸಾರ್ವಜನಿಕರು ಅವುಗಳಿಗೆ ತೊಂದರೆ ಕೊಡದೆ ಅವುಗಳ ರಕ್ಷಣೆ ಮಾಡಬೇಕು ಎಂದು ಚಿಗಟೇರಿ ಪ್ರಾದೇಶಕ ಅರಣ್ಯದ ಗಸ್ತು ಪಾಲಕ ಸಾತವಾಡಿ ರಾಘವೇಂದ್ರ ತಿಳಿಸಿದರು.
ತಾಲೂಕಿನ ಕಣಿವಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹರಪನಹಳ್ಳಿ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ ಹಮ್ಮಿಕೊಂಡಿದ್ದ `ಬೆಂಕಿ ಜಾಗೃತಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ಬೇಸಿಗೆಯಾದ ಕಾರಣ ಬೆಟ್ಟ-ಗುಡ್ಡಗಳಲ್ಲಿರವ ಹುಲ್ಲುಗಾವಲು ಪೂರ್ಣ ಒಣಗಿರುತ್ತದೆ. ಅವುಗಳಲ್ಲಿ ಅನೇಕ ಕ್ರಿಮಿ-ಕೀಟಗಳು, ಪ್ರಾಣಿ-ಪಕ್ಷಿಗಳು ಗೂಡುಗಳನ್ನು ಕಟ್ಟಿರುತ್ತವೆ. ಕಾಡಿಗೆ ಬೆಂಕಿ ಹಚ್ಚುವುದು ಕಾನೂನು ಬಾಹಿರವಾಗಿದ್ದು, ಅನಧಿಕೃತವಾಗಿ ಕಾಡನ್ನು ಕಡಿಯುವುದು, ಕಾಡಿಗೆ ಬೆಂಕಿಯನ್ನು ಹಚ್ಚುವುದು ಕಂಡುಬAದಲ್ಲಿ ಅಂತವರಿಗೆ ೨೪ಸಿ(೧) ಕಾನೂನಿನನ್ವಯ ೧ ವರ್ಷದವರೆಗೆ ಸೆರೆವಾಸ ಹಾಗೂ ೨ ಸಾವಿರ ರೂ.ಗಳವರೆಗೆ ಜುಲ್ಮಾನೆ ವಿಧಿಸಲಾಗುವದೆಂದರು.
ಶಿಕ್ಷಕ ಎಂ.ರಮೇಶ್ ಮಾತನಾಡಿ, ದೇಶದಲ್ಲಿ ಕೈಗಾರಿಕೋದ್ಯಮಗಳ ಹಾವಳಿಯಿಂದ ಕಾಡು ಬಹುತೇಕ ನಶಿಸುತ್ತಿದ್ದು, ಉಳಿದ ಕಾಡನ್ನು ರಕ್ಷಿಸಿ ಅದರಲ್ಲಿರುವ ಪ್ರಾಣಿ ಸಂಕುಲಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಶಿಕ್ಷಕರಾದ ವೀಣಾ ಸಿ, ಶಾಹೀ ನಾಭೀ ಗುತ್ತಿ, ಆರ್. ರಾಮ ನಾಯಕ್, ಮಲ್ಲಿಕಾರ್ಜುನ್.ಎ, ನಾಗರಾಜ.ವೈ, ಸವಿತಾ ರಶ್ಮಿ ಹಾಗೂ ಗ್ರಾಮದ ಪ್ರಮುಖರಾದ ಡಿ. ವೀರಣ್ಣ, ದೊಡ್ಡ ರಾಮಣ್ಣ, ಬಸವರಾಜ, ಪವನ್ ಕುಮಾರ್ ಹಾಗೂ ವಲಯ ಅರಣ್ಯ ಸಿಬ್ಬಂದಿಗಳು ಇದ್ದರು.