ಕಾಂಗ್ರೆಸ್ಸ್ ನಿಂದ ಡೋಂಗಿ ದಲಿತ ಕಾಳಜಿ ಬಯಲು

0
BJP protest
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್‌ನವರು ತಮ್ಮ ಗೆಲುವಿನ ಸಲುವಾಗಿ ದಲಿತರಿಗೆ ಮೀಸಲಿಟ್ಟಿದ್ದ 11,144 SCSP/TSP  ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲು ವರ್ಗಾಯಿಸಿ, ತಮ್ಮ ಸ್ವಾರ್ಥ ಸಾಧನೆ ಪೂರೈಸಿಕೊಂಡು ಡೋಂಗಿ ದಲಿತ ಕಾಳಜಿಯನ್ನು ಬಯಲು ಮಾಡಿದ್ದಾರೆ. ದಲಿತರ ಹಿತರಕ್ಷಣೆ ಮಾಡಬೇಕಿದ್ದ ಸಮಾಜಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪನವರು ಈ ಅನ್ಯಾಯದ ವಿರುದ್ಧ ಸೊಲ್ಲೆತ್ತದೆ ಕಾಂಗ್ರೆಸ್ ಪಕ್ಷದ ಹಿತಕ್ಕೆ ದಲಿತ ಸಮುದಾಯದ ಹಿತವನ್ನು ರಾಜಿ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಆರೋಪಿಸಿದರು.

Advertisement

ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ವತಿಯಿಂದ ರಾಜ್ಯದಲ್ಲಿ ಕಳೆದ ಒಂಭತ್ತು ತಿಂಗಳಲ್ಲಿ ಕಾಂಗ್ರೆಸ್ ಆಡಳಿತವು ದಲಿತ ಸಮುದಾಯದ ವಿಚಾರದಲ್ಲಿ ಕೇವಲ ಮಾತಿನಲ್ಲಿ ಮಾತ್ರ ಕಾಳಜಿಯನ್ನು ತೋರಿ ದಲಿತ ಸಮುದಾಯವನ್ನು ವಂಚಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯನವರು ಅಲ್ಪಸಂಖ್ಯಾತರಿಗೆ ೧೦ ಸಾವಿರ ಕೋಟಿ ರೂ ಹಣವನ್ನು ವೆಚ್ಚ ಮಾಡಲು ಮಾತ್ರ ಯಾವ ಗ್ಯಾರಂಟಿಯೂ ಅಡ್ಡ ಬಂದಿಲ್ಲ. ಇವರಿಗೆ ದಲಿತರ ಹಿತಾಸಕ್ತಿಗಿಂತ ಮತ ಬ್ಯಾಂಕ್ ರಾಜಕಾರಣವೇ ಆದ್ಯತೆಯಾಗಿರುವುದು ಶೋಚನೀಯ ಸಂಗತಿ. ಮೊರಾರ್ಜಿ ಶಾಲೆಯ ಅಭಿವೃದ್ಧಿ ಮತ್ತು ಹೊಸ ಶಾಲೆಗಳ ಆರಂಭಕ್ಕೆ ಮೀಸಲಾದ ಹಣವೂ ಇತರ ಯೋಜನೆಗಳಿಗೆ ಬಳಕೆಯಾಗಿ ದಲಿತ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮುಳಗುಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಪಕ್ಕಿರೇಶ ರಟ್ಟಿಹಳ್ಳಿ ಮಾತನಾಡಿ, ಗ್ಯಾರಂಟಿಗೆ ಹಣ ನೀಡಬೇಕಾದ ಕಾರಣ ೨೦೨೪-೨೫ರ ಮುಂಗಡ ಪತ್ರದಲ್ಲಿ ಮತ್ತೆ ೧೧ಸಾವಿರ ಕೋಟಿ ರೂ ಅನುದಾನ ಕಡಿತವಾಗಿದೆ. ಸಂವಿಧಾನ ಜಾಥಾ ಮಾಡುತ್ತಿರುವ ಸರಕಾರ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ದಲಿತರಿಗೆ ಸೇರಬೇಕಾದ ಅನುದಾನದ ವಿಷಯದಲ್ಲಿ ಅನ್ಯಾಯ ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಗದಗ-ಬೆಟಗೇರಿ ನಗರಸಭಾಧ್ಯಕ್ಷೆ ಉಷಾ ದಾಸರ, ಪ್ರಮುಖರಾದ ಈಶ್ವರಪ್ಪ ನಾಯ್ಕರ, ಅನಿಲ ಅಬ್ಬಿಗೇರಿ, ಪ್ರಶಾಂತ ನಾಯ್ಕರ, ಲಕ್ಷ್ಮಣ ದೊಡ್ಡಮನಿ, ಈಶಪ್ಪ ನಾಯ್ಕರ, ಶಿವು ಹಿರೇಮನಿಪಾಟೀಲ, ನಾಗರಾಜ ತಳವಾರ, ಗೋವಿಂದರಾಜ ಪೂಜಾರ, ದೇವಪ್ಪ ಇಟಗಿ, ಶಶಿಧರ ದಿಂಡೂರ, ಈರ್ಷಾದ ಮಾನ್ವಿ, ಮುತ್ತು ಮುಶಿಗೇರಿ, ರಮೇಶ ಸಜ್ಜಗಾರ, ಮಂಜುನಾಥ ಶಾಂತಗೇರಿ, ಮಲ್ಲು ಮಾದರ, ಸುರೇಶ ಚಲವಾದಿ, ನಿರ್ಮಲಾ ಕೊಳ್ಳಿ, ವಾಯ್.ಪಿ. ಅಡ್ನೂರ, ವಿಜಯಲಕ್ಷ್ಮಿ ಮಾನ್ವಿ, ರೇಖಾ ಬಂಗಾರಶೆಟ್ಟರ, ಬೂದಪ್ಪ ಹಳ್ಳಿ, ನವೀನ ಕೊಟೆಕಲ್, ರಾಹುಲ ಸಂಕಣ್ಣವರ, ಪದ್ಮಾ ಮುತ್ತಲದಿನ್ನಿ, ಗಂಗಾಧರ ಹಬೀಬ, ವಿನಾಯಕ ಮಾನ್ವಿ, ಮಂಜುನಾಥ ವಡ್ಡರ, ಮಾರುತಿ ಮ್ಯಾಗೇರಿ, ಶರಣು ಚಲವಾದಿ, ಶಿವಾನಂದ ಮಾದರ, ಮುದಿಯಪ್ಪ ದಾಣಿ, ಪ್ರವೀಣ ವಡ್ಡರ ಮುಂತಾದವರು ಉಪಸ್ಥಿತರಿದ್ದರು.

ರೈತ ನಿಧಿ ಯೋಜನೆಯಲ್ಲಿ ದಲಿತ ಕುಟುಂಬದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಸ್ಥಗಿತಗೊಂಡಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ಹೆಚ್ಚುವರಿಯಾಗಿ ನೀಡುತ್ತಿದ್ದ ೪ ಸಾವಿರ ರೂ. ಗಳಿಗೂ ಕತ್ತರಿ ಪ್ರಯೋಗವಾಗಿದೆ. ಸಿದ್ದರಾಮಯ್ಯನವರು ಬಾಯಿ ತೆರೆದರೆ ದಲಿತ ಮತ್ತು ಆದಿವಾಸಿಗಳ ಕಲ್ಯಾಣದ ಬಗ್ಗೆ ಮಾತನಾಡುವುದಕ್ಕೆ ಮಾತ್ರ ಅವರ ಹಿತಾಸಕ್ತಿಯನ್ನು ಸಿಮೀತಗೊಳಿಸಿದ್ದಾರೆ ಎಂದು ರಾಜು ಕುರುಡಗಿ ಆರೋಪಿಸಿದರು.


Spread the love

LEAVE A REPLY

Please enter your comment!
Please enter your name here