ವಿಜಯಸಾಕ್ಷಿ ಸುದ್ದಿ, ಗದಗ : ಪ್ರತಿಯೊಬ್ಬ ವಿದ್ಯಾರ್ಥಿ ಅಥವಾ ವ್ಯಕ್ತಿ ತಾನಂದುಕೊಂಡ ಕ್ಷೇತ್ರದಲ್ಲಿ ಸಾಧನೆ ಮಾಡಲು ಹಂಬಲಿಸುತ್ತಾನೆ. ಆದರೆ, ಆ ಗುರಿ ಸಾಧನೆಗೆ ಶಿಸ್ತು ಮೊದಲ ಮೆಟ್ಟಿಲಾದರೆ, ಶ್ರದ್ಧೆ, ಪ್ರಾಮಾಣಿಕತೆ ಮತ್ತು ಪರಿಶ್ರಮ ಮುಂದಿನ ಮೆಟ್ಟಿಲುಗಳು. ಪ್ಯಾರಾ ಮೆಡಿಕಲ್ ಓದಿದವರಿಗೆ ಉದ್ಯೋಗವಕಾಶಗಳು ಹೆಚ್ಚು ಎಂದು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್)ಯ ಪ್ರಾಚಾರ್ಯ ಡಾ. ರಾಜು ಜಿ.ಎಂ. ಹೇಳಿದರು.
ಅವರು ಇಲ್ಲಿನ ಜನ ಸೇವಾ ಸಮಿತಿಯ ಶ್ರೀ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ೨೦೨೩-೨೪ನೇ ಸಾಲಿಗೆ ಪ್ರವೇಶ ಪಡೆದ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ‘ಗುರಮ್ಮ ಕಾಲೇಜ್ ಆಫ್ ನರ್ಸಿಂಗ್’ದ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಫ್ರೆಶರ್ಸ್ ಡೇ’ (ಸ್ವಾಗತ ಸಮಾರಂಭ) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಿಗೆ ಇರುವಷ್ಟೇ ಮಹತ್ವ ನರ್ಸಿಂಗ್ ಸೇರಿ ಪ್ಯಾರಾ ಮೆಡಿಕಲ್ ಕೋರ್ಸ್ ಮುಗಿಸಿದವರಿಗೆ ಇದೆ. ಅನಾರೋಗ್ಯಕ್ಕೀಡಾದ ಸಂದರ್ಭದಲ್ಲಿ ಕಾಯಿಲೆ ಪತ್ತೆ ಸಮರ್ಪಕವಾಗಿರದಿದ್ದರೆ ಚಿಕಿತ್ಸೆ ಕಷ್ಟ. ಆ ಕಾಯಿಲೆ ಪತ್ತೆ ಮಾಡುವವರೇ ಈ ಪ್ಯಾರಾ ಮೆಡಿಕಲ್ ಓದಿದವರು ಎಂದು ಬಣ್ಣಿಸಿ, ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ, ಪಾಲಕರು ಹಾಗೂ ಓದಿದ ಸಂಸ್ಥೆಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.
ಕಿತ್ತೂರ ಕರ್ನಾಟಕ ದಿನಪತ್ರಿಕೆ ಸಂಪಾದಕ ಮಂಜುನಾಥ ಬಸಪ್ಪ ಅಬ್ಬಿಗೇರಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಪ್ಯಾರಾ ಮೆಡಿಕಲ್ ಸೇವೆಗೆ ಹೆಚ್ಚು ಮಹತ್ವ ಇದೆ. ಅನಾರೋಗ್ಯಕ್ಕೀಡಾದಾಗ ಅದನ್ನು ಮೊದಲ ಹಂತದಲ್ಲಿ ವಿವಿಧ ಪರೀಕ್ಷೆಗಳ ಮೂಲಕ ಪತ್ತೆ ಮಾಡುವುವವರೇ ಈ ಪ್ಯಾರಾ ಮೆಡಿಕಲ್ ಓದಿದ ವಿದ್ಯಾರ್ಥಿಗಳು. ಹೀಗಾಗಿ ನರ್ಸಿಂಗ್ ಸೇವೆ ದೊಡ್ಡದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವಿನಯ ಹುಬ್ಬಳ್ಳಿ ಮಾತನಾಡಿ, ನಾವು ವೈದ್ಯಕೀಯ ಕ್ಷೇತ್ರಕ್ಕೆ ಪೂರಕವಾಗಿ ಪ್ಯಾರಾ ಮೆಡಿಕಲ್ ಕೋರ್ಸ್ಗಳನ್ನು ನಡೆಸುತ್ತಿದ್ದೇವೆ. ಸ್ವಸ್ಥ ಸಮಾಜಕ್ಕೆ ಇದು ಕೂಡ ಒಂದು ರೀತಿಯ ಸೇವೆ.ನಮಗೆ ಪ್ರತಿಯೊಬ್ಬ ವಿದ್ಯಾರ್ಥಿ, ಅವರ ಪಾಲಕರು, ಸಮಾಜ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಂಜುನಾಥ ಬಸಪ್ಪ ಅಬ್ಬಿಗೇರಿ ಹಾಗೂ ಡಾ. ರಾಜು ಜಿ.ಎಂ. ಅವರನ್ನು ಶ್ರೀ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು. ಜನ ಸೇವಾ ಸಮಿತಿಯ ಶ್ರೀ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ೨೦೨೩-೨೪ನೇ ಸಾಲಿಗೆ ಪ್ರವೇಶ ಪಡೆದ ಮೊದಲ ವರ್ಷದ ವಿದ್ಯಾರ್ಥಿಗಳು ಕೇಕ್ ಕತ್ತರಿಸಿ, ಸಂಭ್ರಮಿಸಿದರು.
ಶ್ರೀ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಅನಘಾ ವಿನಯ ಹುಬ್ಬಳ್ಳಿ, ಕಾಲೇಜಿನ ಪ್ರಾಚಾರ್ಯ ಆರ್.ವಿ. ಜವಳಿ ವೇದಿಕೆಯಲ್ಲಿದ್ದರು. ಪಿಯು ಕಾಲೇಜಿನ ಪ್ರಾಚಾರ್ಯ ಎಚ್.ಎಫ್. ಪೂಜಾರ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಶ್ರೀಗೌರಿ ತಂಡದವರು ಪ್ರಾರ್ಥಿಸಿದರು. ಶ್ರೀದೇವಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ರೂಪಾ ವಂದಿಸಿದರು.
ಜನ ಸೇವಾ ಸಮಿತಿ ಸಂಸ್ಥೆಯ ಕಾರ್ಯದರ್ಶಿ, ವಕೀಲರು ಹಾಗೂ ನೋಟರಿ ಆಗಿರುವ ವಿ.ಬಿ. ಹುಬ್ಬಳ್ಳಿ ಮಾತನಾಡಿ, ಪ್ಯಾರಾ ಮೆಡಿಕಲ್ ಕೋರ್ಸ್ ಬಗ್ಗೆ ಯಾರೂ ಅಲಕ್ಷö್ಯ ಮಾಡಬಾರದು. ಈ ಕ್ಷೇತ್ರದ ಸೇವೆಗೆ ಬೆಲೆ ಕಟ್ಟಲಾಗದ್ದು. ಪ್ಯಾರಾ ಮೆಡಿಕಲ್ ಓದಿದ ಯಾರೊಬ್ಬರೂ ನಿರುದ್ಯೋಗ ಸಮಸ್ಯೆ ಎದುರಿಸುತ್ತಿಲ್ಲ. ಸಂಕೋಚ ಪಡದೇ ಮನಸ್ಸಿಟ್ಟು ಓದಿ, ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರಲ್ಲದೆ, ಬಡವರಾಗಿ ಹುಟ್ಟುವುದು ತಪ್ಪಲ್ಲ. ಆದರೆ, ಅದನ್ನು ಮೆಟ್ಟಿನಿಂತು ಬಡವನಾಗಿ ಸಾಯಬಾರದು. ಆ ಅವಕಾಶ ನಮ್ಮ ಕೈಯಲ್ಲೇ ಇರುತ್ತದೆ ಎಂದು ಹೇಳಿದರು.



