ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ನಿರ್ಮಿಸಲಾಗುತ್ತಿರುವ ಮನೆಗಳು ಸಂಪೂರ್ಣ ಕಳಪೆಯಾಗಿವೆ.
ಗುತ್ತಿಗೆದಾರರು ಕಳಪೆ ಗುಣಮಟ್ಟದ ಮತ್ತು ಕಡಿಮೆ ಪ್ರಮಾಣದ ಸಾಮಗ್ರಿಗಳನ್ನು ನೀಡಿ ಫಲಾನುಭವಿಗಳಿಗೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಶನಿವಾರ ಫಲಾನುಭವಿಗಳು ಪ್ರತಿಭಟನೆ ನಡೆಸಿದರು. ಸೇರಿದ್ದ ಫಲಾನುಭವಿಗಳು ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಪ್ರದರ್ಶಿಸಿ ಅಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಮಾಗಡಿ, ಯುವ ಮುಖಂಡ ನಾಗರಾಜ ಚಿಂಚಲಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬಸವರಾಜ ಹಿರೇಮನಿ, ಬಸವರಾಜ ಕಲ್ಲೂರ ಮುಂತಾದವರು ಕೊಳಚೆ ನಿರ್ಮೂಲಮ ಮಂಡಳಿಯಿಂದ ನಿರ್ಮಾಣಗೊಳ್ಳುತ್ತಿರುವ ಮನೆಗಳು ಸಂಪೂರ್ಣ ಕಳಪೆಯಾಗಿದ್ದು ಫಲಾನುಭವಿಗಳಿಗೆ ದೊಡ್ಡ ಪ್ರಮಾಣದ ಅನ್ಯಾಯವೇ ನಡೆಯುತ್ತಿದೆ ಎಂದು ಆರೋಪಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳು, ಸಂಬಂಧಿಸಿದ ಇಲಾಖೆಯರುವ ಶೀಘ್ರ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು.
ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆಯ ಅಧ್ಯಕ್ಷ ಸುರೇಶ್ ಹಟ್ಟಿ, ಮಂಜುನಾಥ ಮುಳಗುಂದ, ನೂರಹ್ಮದ ಶಿಗ್ಗಾಂವಿ, ಜಾವಿದಖಾನ್ ಸಿದ್ದಿ, ಸುಲ್ತಾನಭಾಷಾ ಸಿದ್ದಿ, ಬಸವರಾಜ ಪೂಜಾರ, ಚಂದ್ರು ಮಾಗಡಿ, ಈರಣ್ಣ ಶಿರಕೋಳ, ಪ್ರವೀಣ ಕಮಡೊಳ್ಳಿ, ರೇಣುಕಾ ಮುಳಗುಂದ, ಬಸವರಾಜ ಪೂಜಾರ, ಕೊಟ್ರಮ್ಮ ದ್ಯಾಮಣ್ಣವರ, ಚಿನ್ನಮ್ಮ ಕಮಡೊಳ್ಳಿ, ಬಸವರಾಜ ಪಾಣಿಗಟ್ಟಿ, ರತ್ನವ್ವ ಗೋಡಿ ಸೇರಿದಂತೆ ನೂರಾರು ಫಲಾನುಭವಿಗಳು ಪಾಲ್ಗೊಂಡಿದ್ದರು.
ಸರಕಾರದಿಂದ ಮನೆ ನಿರ್ಮಾಣಕ್ಕಾಗಿ ಪ್ರತಿ ಫಲಾನುಭವಿಗೆ ೬.೩೯ ಲಕ್ಷ ರೂಗಳನ್ನು ನೀಡುತ್ತಿದೆ. ಆದರೆ ಸದರಿ ಮನೆಗಳನ್ನು ನಿರ್ಮಿಸುತ್ತಿರುವ ಗುತ್ತಿಗೆದಾರರು ನೀಡುತ್ತಿರುವ ಕಚ್ಚಾ ಸಾಮಗ್ರಿಗಳ ಬೆಲೆ ಅಂದಾಜು ೨.೮೦-೩ ಲಕ್ಷ ರೂಗಳಷ್ಟು ಮಾತ್ರ ಆಗುತ್ತಿದೆ. ಮನೆ ನಿರ್ಮಿಸಲು ನೀಡುತ್ತಿರುವ ಸಿಮೆಂಟ್, ಕಬ್ಬಿಣ, ಎಂಸ್ಯಾಂಡ್, ಖಡಿ, ಕಿಟಕಿ, ಬಾಗಿಲು, ಸೇರಿದಂತೆ ಎಲ್ಲವೂ ಅತ್ಯಂತ ಕಳಪೆ ಗುಣಮಟ್ಟದ್ದಾಗಿವೆ. ಒಂದು ಮನೆಯಿಂದ ಲಕ್ಷಾಂತರ ರೂ. ಹಣ ಹೊಡೆಯುವ ಹುನ್ನಾರವೇ ನಡೆದಿದೆ ಎಂದು ಆರೋಪಿಸಿದರು.