ವಿಜಯಸಾಕ್ಷಿ ಸುದ್ದಿ, ಗದಗ : ಯಾವುದೇ ಸಂಸ್ಥೆಯಾಗಿರಲಿ, ಸಮುದಾಯದ ಮಕ್ಕಳ ಬೆಳವಣಿಗೆಗೆ ಬೆನ್ನೆಲುಬಾಗಿ ನಿಲ್ಲಬೇಕು. ಶಿಕ್ಷಣ ಬೆಳೆದರೆ ಶಿಕ್ಷಣ ಸಂಸ್ಥೆಗಳು ಬೆಳೆಯುತ್ತವೆ ಎಂದು ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಘಟಕ ಹಾಗೂ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ವತಿಯಿಂದ ನಗರದ ಕನಕ ಭವನದಲ್ಲಿ ಭಾನುವಾರ ಜರುಗಿದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ರಾಕೇಶ ಸಿದ್ದರಾಮಯ್ಯ ಟ್ರಸ್ಟ್ನ ಶೈಕ್ಷಣಿಕ ಸಂಕೀರ್ಣಗಳ ಭೂಮಿಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ನಿಂದ ಕಳೆದ ಹಲವು ವರ್ಷಗಳಿಂದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತ ಬಂದಿದೆ. ಶಿಕ್ಷಣವೊಂದೇ ಸಮಾಜವನ್ನು ಜಾಗೃತಿ ಗೊಳಿಸುವ ಸಾಧನವಾಗಿದೆ.
ಸಮಾಜದಲ್ಲಿ ಸಮಾನತೆ ತರಲು ಜಾತಿ ವ್ಯವಸ್ಥೆ ವಿರುದ್ಧ ಮೊದಲು ಹೋರಾಡಬೇಕು. ಮಾಧ್ಯಮ, ನ್ಯಾಯಾಲಯ ಮತ್ತು ಭಾಗಶಃ ಎಲ್ಲ ವಲಯಗಳಲ್ಲಿ ಪ್ರಬಲ ಸಮುದಾಯದವರಿದ್ದಾರೆ. ಸಾಮಾಜಿಕ ನ್ಯಾಯ ಒದಗಿಸಲು ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ನೀಡಿದ್ದಾರೆ ಎಂದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಬಿ. ವೆಂಕಟೇಶ ಮಾತನಾಡಿ, ಆಡಳಿತದಲ್ಲಿ ಕೆಲಸ ಮಾಡಲು ಅವಕಾಶ ಇದ್ದಾಗ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ವಿವಿ ಕುಲಪತಿ ವಿಷ್ಣುಕಾಂತ ಚಟಪಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ನೀಡುವ ಇಂತಹ ಕಾರ್ಯಕ್ರಮಕ್ಕೆ ಸಮುದಾಯದ, ಸರ್ಕಾರದ ಸಹಕಾರ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಮಾತನಾಡಿ, ಸಮಾಜದಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಜಿಲ್ಲೆಯ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುತ್ತ, ಸಮಾಜವನ್ನು ಸಂಘಟಿಸುತ್ತ ಬಂದಿದೆ. ಇದರ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ರಾಕೇಶ ಸಿದ್ದರಾಮಯ್ಯ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಮಾಜಿ ಶಾಸಕ ಯತೀಂದ್ರ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿAದ ರಾಜ್ಯಪ್ರಶಸ್ತಿ ಪಡೆದ ವೆಂಕಟೇಶ ಇಮರಾಪೂರ, ಮಾಳಿಂಗರಾಯ ಪೂಜಾರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕುಲಸಚಿವ ಬಸವರಾಜ ಲಕ್ಕಣ್ಣವರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರವಿ ಗುಂಜೀಕರ, ಧವನ ರಾಕೇಶ, ಶಶಿಧರ ರೊಳ್ಳಿ, ರಾಕೇಶ ಸಿದ್ದರಾಮಯ್ಯ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ರೊಳ್ಳಿ, ನಾಗಪ್ಪ ಗುಗ್ಗರಿ, ಚೆನ್ನಮ್ಮ ಹುಳಕಣ್ಣವರ, ಪ್ರಕಾಶ ಕರಿ, ಶೇಖಣ್ಣ ಕಾಳೆ ಮುಂತಾದವರು ಇದ್ದರು. ಪ್ರೊ. ಬಿ.ಆರ್. ಜಾಲಿಹಾಳ ಸ್ವಾಗತಿಸಿದರು. ಪ್ರೊ. ಮಾರುತಿ ಮಡ್ಡಿ ಕಾರ್ಯಕ್ರಮ ನಿರೂಪಿಸಿದರು.
ಸರ್ಕಾರದ ವ್ಯವಸ್ಥೆಯಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಸಿಎಂ ಸಿದ್ದರಾಮಯ್ಯ ಶ್ರಮಿಸಿದ್ದಾರೆ. ಧರ್ಮದಲ್ಲಿ ರಾಜಕಾರಣ ಮಾಡಬಾರದು. ಧಾರ್ಮಿಕ ವಿಚಾರ ಮುಂದಿಟ್ಟುಕೊಂಡು ಮತ ಕೇಳಬಾರದು. ಧರ್ಮ ಕಟ್ಟಲು ಮಠಾಧೀಶರು, ಸಂತರು ಇದ್ದಾರೆ. ರಾಜಕಾರಣಿಗಳು ಉತ್ತಮ ಆಡಳಿತ ನೀಡುವತ್ತ ಗಮನಹರಿಸಬೇಕು ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.