ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯ ಕುಡಿಯುವ ನೀರಿನ ಪರಿಸ್ಥಿತಿ ಅವಲೋಕಿಸಿದ್ದು, ನೀರಿನ ಸಮಸ್ಯೆಯಿರುವ ಪ್ರದೇಶಗಳಲ್ಲಿ ಕುಡಿಯುವ ನೀರಿನ ಟ್ಯಾಂಕರ್ ಪೂರೈಸುವುದು, ಬಂದ್ ಆಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸುವುದು ಸೇರಿ ನೀರಿನ ಪೂರೈಕೆಯಲ್ಲಿ ನಿಗಾ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಕುಡಿಯುವ ನೀರಿನ ಕುರಿತು ಸಭೆ ನಡೆಸಿ, ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಅಗತ್ಯವಿರುವ ನೀರಿನ ಬಗ್ಗೆ ದೀರ್ಘವಾಗಿ ಚರ್ಚೆ ಮಾಡಿದ್ದು, ಸಿಂಗಟಾಲೂರು ಬ್ಯಾರೇಜಿನಲ್ಲಿ ಒಟ್ಟು 1 ಟಿಎಂಸಿ ನೀರು ಲಭ್ಯವಿದೆ. ಅದರಲ್ಲಿ 0.5 ಟಿಎಂಸಿ ಡೆಡ್ ಸ್ಟೋರೆಜ್ ಬಿಟ್ಟು, 0.5 ಟಿಎಂಸಿ ನೀರನ್ನು ಉಪಯೋಗಿಸಬಹುದಾಗಿದೆ. 0.02 ಟಿಎಂಸಿ ನೀರು ಪ್ರತಿದಿನ ಅವಶ್ಯವಿದ್ದು, ಕನಿಷ್ಠ 50 ದಿನಗಳ ವರೆಗೆ ನೀರು ಪೂರೈಕೆ ಮಾಡಬಹುದಾಗಿದೆ ಎಂದು ವಿವರಿಸಿದರು.
ಕುಡಿಯುವ ನೀರು ಹೊರತುಪಡಿಸಿ ರೈತರ ಪಂಪ್ಸೆಟ್, ನೀರಾವರಿಗೆ ಬಳಸದೆ ಇರುವ ನಿಟ್ಟಿನಲ್ಲಿ ನೀರಾವರಿ ಇಲಾಖೆ, ಪೊಲೀಸ್ ಇಲಾಖೆ ತಂಡ ರಚಿಸಿ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಅವರಿಗೆ ಸೂಚನೆ ನೀಡಲಾಗಿದೆ. ಅಲ್ಲದೇ, ಕುಡಿಯುವ ನೀರಿಗೆ ಹೊರತು ಪಡಿಸಿ ಬೇರೆಡೆ ಪೋಲಾಗದ ಹಾಗೆ ನೋಡಿಕೊಳ್ಳಲು ತಿಳಿಸಲಾಗಿದೆ ಎಂದು ಹೇಳಿದರು.
ಗದಗ ಜಿಲ್ಲೆಯಲ್ಲಿ ಈವರೆಗೆ ಟ್ಯಾಂಕರ್ ನೀರು ಪೂರೈಕೆ ಮಾಡುವಷ್ಟರ ಮಟ್ಟಿಗೆ ಪರಿಸ್ಥಿತಿ ಬಂದಿಲ್ಲ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಕೆಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದಿರುವ ಮಾಹಿತಿ ಬಂದಿದ್ದು, ಸಹಾಯವಾಣಿ ತೆರೆಯುವ, ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ತಕ್ಷಣ ಟ್ಯಾಂಕರ್ ನೀರು ಪೂರೈಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೋರ್ವೆಲ್ ಅವಶ್ಯವಿದೆ ಎನಿಸಿದರೆ ಕೂಡಲೇ ಅಂತಹ ಸ್ಥಳಗಳಲ್ಲಿ ಕೊಳವೆಬಾವಿ ಕೊರೆಸಲು ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಶುದ್ಧ ಕುಡಿಯುವ ನೀರಿನ ಕೆಲವು ಘಟಕಗಳು ಬಂದ್ ಆಗಿರುವ ಕುರಿತು ಮಾಹಿತಿ ಬಂದಿದ್ದು, ಪ್ರತಿ ತಾಲೂಕಿನ ಇಬ್ಬರು ಅಧಿಕಾರಿಗಳಂತೆ ಎಲ್ಲ ತಾಲೂಕುಗಳಲ್ಲಿನ ಒಟ್ಟು ಎಷ್ಟು ಶುದ್ದ ಕುಡಿಯುವ ನೀರಿನ ಘಟಕಗಳು ಬಂದ್ ಆಗಿವೆ ಎಂಬುದರ ಕುರಿತು ಹತ್ತು ದಿನದೊಳಗಾಗಿ ವರದಿ ತರಿಸಿಕೊಂಡು, ದುರಸ್ತಿಗೊಳಿಸಿ, ನೀರಿನ ಸಮಸ್ಯೆ ಪರಿಹರಿಸುವ ಮೂಲಕ ಸಾರ್ವಜನಿಕರ ಬಳಕೆಗೆ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ್, ವಾರ್ತಾಧಿಕಾರಿ ವಸಂತ ಮಡ್ಲೂರ, ತಹಸೀಲ್ದಾರ ಶ್ರೀನಿವಾಸ ಮೂರ್ತಿ ಕುಲಕರ್ಣಿ ಹಾಜರಿದ್ದರು.
ಜಿಲ್ಲೆಯ ಅಂತರ್ಜಲ ಮಟ್ಟ
ಜಿಲ್ಲೆಯಲ್ಲಿ 2023ರ ಅಕ್ಟೋಬರ್ ತಿಂಗಳಿನಲ್ಲಿ 6.83 ಮೀಟರ್ ಅಂತರ್ಜಲ ಮಟ್ಟವಿತ್ತು. ಫೆಬ್ರವರಿ ಅಂತ್ಯದಲ್ಲಿ 13.08 ಮೀಟರ್ ಕೆಳಗಿಳಿದಿದೆ. ತಾಲೂಕುವಾರು ನೋಡುವುದಾದರೆ ಮುಂಡರಗಿ 6.90, ಗದಗ 9.53, ನರಗುಂದ 11.83, ರೋಣ 13.25, ಗಜೇಂದ್ರಗಡ 21.0, ಲಕ್ಷ್ಮೇಶ್ವರ 16.73, ಶಿರಹಟ್ಟಿ 12.8 ಮೀಟರ್ನಷ್ಟು ಕೆಳಗಿದೆ. ಆದ್ದರಿಂದ ಸಾರ್ವಜನಿಕರು ನೀರನ್ನು ಬಹಳ ಜಾಗೃತಿಯಿಂದ ಬಳಸಬೇಕು ಎಂದು ಮನವಿ ಮಾಡಿದರು.
4-5ಲೋಡ್ ಮೇವು ಶೇಖರಣೆಗೆ ಸೂಚನೆ
ಬರಗಾಲ ಹಿನ್ನೆಲೆಯಲ್ಲಿ ಮೇವು ಸಿಗದೆ ರೈತರು ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೇವು ಬ್ಯಾಂಕ್ ಸ್ಥಾಪನೆಗೆ ಮುಂದಾಗಿದೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 5 ಗ್ರಾಪಂ ವ್ಯಾಪ್ತಿಯಲ್ಲಿ ಮೇವು ಬ್ಯಾಂಕ್ ತೆರೆಯಲಾಗುತ್ತಿದ್ದು, 4-5 ಟ್ರಕ್ ಲೋಡ್ ಮೇವು ಶೇಖರಣೆ ಮಾಡಲು ಸೂಚಿಸಲಾಗಿದೆ.
ಜಿಮ್ಸ್ ಆವರಣದಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, 21.25 ಕೋಟಿ ರೂ. ಮೊತ್ತದ ಅನುದಾನದಲ್ಲಿ ಅದಕ್ಕೆ ಬೇಕಾಗಿರುವ ಮೋಟರೈಸ್ಡ್ ಐಸಿಯು ಬೆಡ್, ಎಮರ್ಜೆನ್ಸಿ ಬ್ಲಾಕ್, ಡಯಾಲಿಸಿಸ್ ರೂಮ್, ಆಪರೇಷನ್ ಥಿಯೇಟರ್, 24 ಬೆಡೆಡ್ ವಾರ್ಡ್ ತೆರೆಯಲು ಮಂಜೂರಾತಿ ದೊರೆತಿದ್ದು, ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ.
– ಎಚ್.ಕೆ. ಪಾಟೀಲ್, ಉಸ್ತುವಾರಿ ಸಚಿವರು.