ವಿಜಯಸಾಕ್ಷಿ ಸುದ್ದಿ, ಗದಗ : ಶಿವಾನಂದ ಮಠದ ಹಿರಿಯ ಶ್ರೀ ಹಾಗೂ ಕಿರಿಯ ಶ್ರೀಗಳ ನಡುವಿನ ಉತ್ತರಾಧಿಕಾರತ್ವದ ವಿವಾದದ ಮಧ್ಯೆಯೂ ಉಚ್ಛ ನ್ಯಾಯಾಲಯದ ಆದೇಶದಂತೆ ಉಭಯ ಶ್ರೀಗಳು ಪೊಲೀಸ್ ಸರ್ಪಗಾವಲಿನಲ್ಲಿ ಪ್ರಣವ ಧ್ವಜಾರೋಹಣ ನಡೆಸಿದರು.
ಕಳೆದೊಂದು ವರ್ಷದಿಂದ ಉಭಯ ಶ್ರೀಗಳ ಮಧ್ಯೆ ಉತ್ತರಾಧಿಕಾರತ್ವದ ಬಗ್ಗೆ ತೀವ್ರ ಜಗ್ಗಾಟ ನಡೆದಿತ್ತು. ಹಿರಿಯ ಶ್ರೀಗಳ ಕ್ರಮವನ್ನು ಕಿರಿಯ ಶ್ರೀಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ರಾಜ್ಯ ಉಚ್ಛ ನ್ಯಾಯಾಲಯ ಮಾ.8ರಂದು ನಡೆಯುವ ಮಹಾಶಿವರಾತ್ರಿ ಸಮಾರಂಭದಲ್ಲಿ ಕಿರಿಯ ಶ್ರೀಗಳ ಹಕ್ಕಿಗೆ ಯಾವದೇ ರೀತಿ ತೊಂದರೆಯನ್ನುಂಟು ಮಾಡುವಂತಿಲ್ಲವೆಂದು ಆದೇಶಿಸಿತ್ತು. ಆದರೆ ಮಠದ ಹಿರಿಯ ಶ್ರೀಗಳು ಮಾತ್ರ ಕಿರಿಯ ಶ್ರೀಗಳನ್ನು ಯಾವುದೇ ಕಾರ್ಯಕ್ರಮಕ್ಕೂ ಆಹ್ವಾನಿಸಿರಲಿಲ್ಲ. ಕಿರಿಯ ಶ್ರೀಗಳ ಭಕ್ತರನ್ನು ಶಿವರಾತ್ರಿ ಮಹೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಯಾವದೇ ಪದಾಧಿಕಾರಿಯನ್ನಾಗಿಸಿರಲಿಲ್ಲ. ಇದು ಕಿರಿಯ ಶ್ರೀಗಳ ಭಕ್ತರ ಅಕ್ರೋಶಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಮಠದ ಪರಿಸರದಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿಯುಂಟಾಗಿತ್ತು. ಮಠದಲ್ಲಿ ಯಾವುದೇ ರೀತಿಯ ಅಚಾತುರ್ಯ ನಡೆಯದಂತೆ ಪೊಲೀಸರು ಸರ್ಪಗಾವಲು ಹಾಕಿದ್ದರು. ಈ ಮಧ್ಯೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಉಭಯ ಶ್ರೀಗಳ ಭಕ್ತರ ಸಭೆ ನಡೆಸಿ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಯಾವುದೇ ಬಣದವರು ಆದೇಶ ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವದಾಗಿ ಎಚ್ಚರಿಸಿದ್ದರು.
ಈ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆ ಜರುಗಿದ ಪ್ರಣವ ಧ್ವಜಾರೋಹಣದಲ್ಲಿ ಶಿವಾನಂದ ಬೃಹನ್ಮಠದ ಹಿರಿಯ ಶ್ರೀ ಅಭಿನವ ಶಿವಾನಂದ ಶ್ರೀಗಳು, ಕಿರಿಯ ಶ್ರೀ ಸದಾಶಿವಾನಂದ ಭಾರತಿ ಶ್ರೀಗಳು ಹಾಗೂ ಉಭಯ ಶ್ರೀಗಳ ಭಕ್ತರು ಪಾಲ್ಗೊಂಡಿದ್ದರು.