ವಿಜಯಸಾಕ್ಷಿ ಸುದ್ದಿ, ಗದಗ : ರೈತರ ಸಾಲ ಹಾಗೂ ರೈತರು ಮಾಡಿರುವ ಉಪಕರಣಗಳ ಸಾಲ, ಅದರೊಂದಿಗೆ ಟ್ರ‍್ಯಾಕ್ಟರ್ ಸಾಲ ಮನ್ನಾ ಮಾಡಬೇಕು ಅಥವಾ ಸಾಲದ ವಸೂಲಾತಿಯನ್ನು ನಿಲ್ಲಿಸಬೇಕೆಂದು ಜಾತ್ಯತೀತ ಜನತಾದಳದ ಪರವಾಗಿ ಈ ಹಿಂದೆ ಪಾದಯಾತ್ರೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅದರ ಬಗ್ಗೆ ರಾಜ್ಯ ಸರ್ಕಾರವು ಕುರುಡುತನ ಹಾಗೂ ಕಿವುಡುತನ ಎರಡನ್ನು ಪ್ರದರ್ಶನ ಮಾಡಿದೆ ಎಂದು ಜೆಡಿಎಸ್ ರಾಜ್ಯದ ವಕ್ತಾರರಾದ ವೆಂಕನಗೌಡ ಗೋವಿಂದಗೌಡ್ರ ಆಕ್ಷೇಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದ ತೇಲಿ ಕುಟುಂಬದ ನಾಲ್ವರು ಸದಸ್ಯರು ಟ್ರಾಕ್ಟರ್ ಸಾಲ ಕಟ್ಟಲಾಗದೆ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ಈಗಾಗಲೇ 700 ರೈತರು ಹತ್ತು ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಸರಕಾರದ ರೈತರ ವಿರೋಧಿ ಧೋರಣೆಯಿಂದ ಸಂಭವಿಸಿದೆ ಎಂದಿದ್ದಾರೆ.
ಇನ್ನಾದರೂ ಸರಕಾರ ಎಚ್ಚೆತ್ತು ರೈತರ ನೆರವಿಗೆ ಧಾವಿಸಬೇಕು. ಸಾಲ ಮನ್ನಾ ಆಗದಿದ್ದರೂ ಕೂಡ ಸಾಲ ವಸೂಲಾತಿಯನ್ನು ನಿಲ್ಲಿಸಬೇಕು. ಈಗ ರಾಜ ಸರ್ಕಾರ ತಕ್ಷಣ ಕಾರ್ಯಪ್ರವೃತ್ತರಾಗಿ ರೈತರ ಆತ್ಮಹತ್ಯೆಯನ್ನು ತಡೆಯಬೇಕೆಂದು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.