ವಿಜಯಸಾಕ್ಷಿ ಸುದ್ದಿ, ರೋಣ : ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳನ್ನು ಅರ್ಥ ಮಾಡಿಕೊಂಡು ಉತ್ತಮ ಕೆಲಸ ಮಾಡುವ ಮೂಲಕ ತಾಲೂಕಿನ ಪ್ರಗತಿ ಹಾಗೂ ಕೀರ್ತಿಗೆ ನಿಮ್ಮದೇ ಆದ ಕೊಡುಗೆಯನ್ನು ನೀಡಿ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ರವಿ ಎ.ಎನ್ ಹೇಳಿದರು.
ಪಟ್ಟಣದ ಗುರು ಭವನದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಹಾಗೂ ನರೇಗಾ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ವಿವಿಧ ಸಿಬ್ಬಂದಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ರೋಣ ತಾಲೂಕಿನ ಪ್ರಗತಿ ಉತ್ತಮಗೊಳಿಸಲು ನಿಮ್ಮದೇ ಆದ ಕೊಡುಗೆಯನ್ನು ನೀಡುವ ಮೂಲಕ ತಾಲೂಕನ್ನು ಉನ್ನತ ಸ್ಥಾನದಲ್ಲಿ ಇರಿಸಿದ್ದಿರಿ. ನಿಮ್ಮೆಲ್ಲರ ಶ್ರಮ ಮತ್ತು ದುಡಿಮೆಯಿಂದ ನಮ್ಮ ತಾಲೂಕು ಮೇಲ್ಮಟ್ಟದಲ್ಲಿದೆ. ಹಾಗಾಗಿ ನಿಮ್ಮನ್ನು ಗೌರವಿಸುವದು ನಮ್ಮ ಕರ್ತವ್ಯವಾಗಿದೆ. ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವವರಿಗೆ ಒತ್ತಡ ಇರುತ್ತದೆ. ಎಷ್ಟೇ ಒತ್ತಡ ಇದ್ದರೂ ಅದನ್ನು ಬದಿಗೊತ್ತಿ ಒಗ್ಗಟ್ಟಾಗಿ ಕೆಲಸ ಮಾಡಿ, ಜಿಲ್ಲೆಯ ಹಾಗೂ ತಾಲೂಕಿನ ಹಿತದೃಷ್ಟಿಯಿಂದ ಹೊಸ ಆರ್ಥಿಕ ವರ್ಷದಲ್ಲಿ ತಮ್ಮ ಸೇವೆ ಹಾಗೂ ಕಾರ್ಯ ಅವಶ್ಯ ಎಂದರು.
ನರೇಗಾ ಯೋಜನೆ ಹಾಗೂ ಪಂಚಾಯತ ರಾಜ್ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ ಪಿಡಿಒ, ಟಿಎಇ, ಡಿಇಒ, ಬಿಎಫ್.ಟಿ, ಜೆಕೆಎಂ, ಸಿಪಾಯಿ, ಬಿಲ್ ಕಲೆಕ್ಟರ್, ವಾಟರಮನ್‌ಗಳಿಗೆ ತಲಾ ಇಬ್ಬರಂತೆ ಹಾಗೂ ತಾ.ಪಂನ ನಾಲ್ವರು ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಸ್ತಾವಿಕವಾಗಿ ಸಹಾಯಕ ನಿರ್ದೇಶಕ ರಿಯಾಜ ಖತೀಬ್(ಗ್ರಾಮೀಣ ಉದ್ಯೋಗ) ಮಾತನಾಡಿದರು. ಸಹಾಯಕ ನಿರ್ದೇಶಕರಾದ (ಪಂಚಾಯತ ರಾಜ್) ಶಿವಯೋಗಿ ರಿತ್ತಿ ಸ್ವಾಗತಿಸಿದರು. ಪಿಡಿಓ ಶಿವನಗೌಡ ಮೆಣಸಗಿ ಹಾಗೂ ಕಾವೇರಿ ಅಸೂಟಿ ಅನಿಸಿಕೆ ವ್ಯಕ್ತಪಡಿಸಿದರು. ಮೇಘರಾಜ ಸಿಂಗ್ರಿ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ತಾಲೂಕ ಯೋಜನಾಧಿಕಾರಿ ಸಿ.ಎಸ್. ನೀಲಗುಂದ, ತಾ.ಪಂ ವ್ಯವಸ್ಥಾಪಕ ದೇವರಾಜ ಸಜ್ಜನಶೆಟ್ಟರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗೀತಾ, ಪಿಡಿಓ ಸಂಘದ ತಾಲೂಕಾಧ್ಯಕ್ಷ ಲೋಹಿತ ಪೂಜಾರ ಸೇರಿದಂತೆ ಪಿಡಿಒಗಳು, ತಾಂತ್ರಿಕ ಸಹಾಯಕರು, ಡಿಇಒಗಳು, ಬಿಎಫ್.ಟಿ, ಗ್ರಾಮ ಕಾಯಕ ಮಿತ್ರರು, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.
ರೋಣ ತಹಸೀಲ್ದಾರ ನಾಗರಜ್ ಕೆ ಮಾತನಾಡಿ, ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ವಾರ್ಷಿಕವಾಗಿ ವಿಶೇಷವಾಗಿ ಕಾರ್ಯ ನಿರ್ವಹಿಸಿದವರನ್ನು ಗರುತಿಸಿ ಅವರನ್ನು ಗೌರವಿಸುವುದು ಉತ್ತಮ ಕಾರ್ಯ. ಇದನ್ನು ತಾ.ಪಂ ಅಧಿಕಾರಿಗಳು ಮಾಡಿದ್ದಾರೆ ಎಂದರು.