ವಿಜಯಸಾಕ್ಷಿ ಸುದ್ದಿ, ಮುದ್ದೇಬಿಹಾಳ : ಜೀವನದ ಉಜ್ವಲ ಭವಿಷ್ಯಕ್ಕೆ ಧರ್ಮಾಚರಣೆ ಅವಶ್ಯಕ. ತತ್ವ ತಳಹದಿಯ ಮೇಲೆ ವೀರಶೈವ ಧರ್ಮ ನಿಂತಿದೆ. ವೀರಶೈವ ಮಠಗಳು ಕಾಲ ಕಾಲದಲ್ಲಿ ಸಂಸ್ಕಾರ, ಸಂಸ್ಕೃತಿ ಕಲಿಸುವ ಆಧ್ಯಾತ್ಮದ ಕೇಂದ್ರಗಳಾಗಿವೆ ಎಂಬುದನ್ನು ಯಾರೂ ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಕುಂಟೋಜಿ ಹಿರೇಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯನನ್ನು ಕಾಡುವ ಚಿಂತೆಗಳು ಹಲವಾರು. ಚಿತೆಯಿಂದ ನಿರ್ಜೀವ ವಸ್ತು ಸುಡಬಹುದು. ಆದರೆ ಚಿಂತೆಯಿಂದ ಸಜೀವ ವಸ್ತು ಕೂಡಾ ನಾಶ ಹೊಂದುತ್ತವೆ. ಚಿಂತೆ ಚಿಂತನೆಗೊಂಡಾಗ ಬದುಕು ವಿಸ್ತಾರಗೊಳ್ಳುತ್ತದೆ. ಒಂದೆಡೆ ವೈಚಾರಿಕ ಪ್ರಜ್ಞೆ ಬೆಳೆದರೆ, ಇನ್ನೊಂದೆಡೆ ಸಂಸ್ಕೃತಿ ಸಭ್ಯತೆ ಕಣ್ಮರೆಯಾಗುತ್ತಿವೆ. ಹೊರಗಿನ ಮಾಲಿನ್ಯ ಕಳೆಯಲು ಹೊರಟಿರುವ ಮನುಷ್ಯ ಅಂತರಂಗದಲ್ಲಿಯೇ ಕತ್ತಲೆ ತುಂಬಿಕೊಂಡಿದ್ದಾನೆ. ಬದುಕಿ ಬಾಳುವ ಮನುಷ್ಯನಿಗೆ ಆಹಾರ, ಆರೋಗ್ಯ ಮತ್ತು ಆಧ್ಯಾತ್ಮ ಜ್ಞಾನದ ಅರಿವು ಮುಖ್ಯ. ಜೀವನ ಶಾಶ್ವತವಲ್ಲ. ಮಾಡಿದ ಸತ್ಕಾರ್ಯಗಳು ಶಾಶ್ವತ. ಜಗದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇವೆ. ಸನ್ಮಾರ್ಗದ ಸತ್ಪಥದಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದರು.
ವೀರಶೈವ ಧರ್ಮ ಜೀವನ ವಿಕಾಸಕ್ಕೆ ಅತ್ಯಮೂಲ್ಯವಾದ ಸೂತ್ರಗಳನ್ನು ಕೊಟ್ಟಿದೆ. ಉಗಮ, ಉತ್ಥಾನ, ಪುನರುತ್ಥಾನ ಮತ್ತು ಜಾಗೃತಿ ಎಂಬ ನಾಲ್ಕು ಹಂತಗಳಲ್ಲಿ ವೀರಶೈವ ಧರ್ಮ ಬೆಳೆದುಕೊಂಡು ಬಂದಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳು ಸರ್ವ ಕಾಲಕ್ಕೂ ಅನ್ವಯಿಸುತ್ತವೆ.
ಕುಂಟೋಜಿ ಹಿರೇಮಠ ಶ್ರೀ ರಂಭಾಪುರಿ ಪೀಠದ ಶಾಖಾ ಮಠವಾಗಿದೆ. ಇಂದು ಮಠದ ಅಧಿಕಾರ ಸೂತ್ರ ವಹಿಸಿಕೊಂಡಿರುವ ವಿದ್ಯಾ ವಿನಯ ಸಂಪನ್ನರಾದ ಚನ್ನವೀರ ಶಿವಾಚಾರ್ಯ ಸ್ವಾಮಿಗಳು ಈ ಭಾಗದ ಸರ್ವ ಜನ ಸಮುದಾಯಕ್ಕೆ ಆದರ್ಶ ಮಾರ್ಗದರ್ಶನ ಮತ್ತು ವೀರಶೈವ ಧರ್ಮ, ಸಂಸ್ಕೃತಿ, ಗುರು ಪರಂಪರೆಯ ಆದರ್ಶ ಮೌಲ್ಯಗಳನ್ನು ಬೆಳೆಸುವರೆಂಬ ಆತ್ಮ ವಿಶ್ವಾಸ ತಮಗಿದೆ ಎಂದ ಜಗದ್ಗುರುಗಳು, ನೂತನ ಶ್ರೀಗಳಿಗೆ ಪಂಚಮುದ್ರಾ ಸಮೇತ ಶ್ರೀ ಪೀಠದಿಂದ ರೇಶ್ಮೇ ಮಡಿ ಸ್ಮರಣಿಕೆ ಫಲ ಪುಷ್ಪಗಳನ್ನಿತ್ತು ಶುಭ ಹಾರೈಸಿದರು.
ನಿಡಗುಂದಿ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ನೂತನ ಶ್ರೀಗಳವರಿಗೆ ಷಟ್ಸ್ಥಲ ಬ್ರಹ್ಮೋಪದೇಶ ಪಂಚಮುದ್ರ ಪ್ರದಾನ ಮಾಡಿದರು. ಅಂಕಲಿ ನಿರುಪಾದೇಶ್ವರ ಮಠದ ವೀರಭದ್ರಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಹಂಪಿ ಸಾವಿರದೇವರಮಠದ ವಾಮದೇವ ಮಹಾಂತ ಶಿವಾಚಾರ್ಯರು, ಮಳಲಿ ಡಾ.ನಾಗಭೂಷಣ ಶಿವಾಚಾರ್ಯರು, ಗುಂಡಕನಾಳ ಗುರುಲಿಂಗ ಶಿವಾಚಾರ್ಯರು, ಬದಾಮಿಯ ಶಿವಪೂಜಿ ಶಿವಾಚಾರ್ಯರು, ಚಿಮ್ಮಲಗಿಯ ಸಿದ್ಧರೇಣುಕ ಶಿವಾಚಾರ್ಯರು, ದೇವರಹಿಪ್ಪರಗಿಯ ಜಡೆ ಸಿದ್ಧೇಶ್ವರ ಶಿವಾಚಾರ್ಯರು, ಆಲಮಟ್ಟಿಯ ರುದ್ರಮುನಿ ದೇವರು ಉಪಸ್ಥಿತರಿದ್ದರು.
ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ಸಮಾರಂಭದಲ್ಲಿ ಭಾಗವಹಿಸಿ ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು. ಅತಿಥಿಗಳಾಗಿ ರುದ್ರಯ್ಯ ಮಠ, ಹಣಮಂತರಾಯ ಬಿರಾದಾರ, ಸುರೇಶ ಸಜ್ಜನ, ಭೀಮನಗೌಡ ಬಿರಾದಾರ, ಸಂಗಣ್ಣ ಕುಂಬಾರ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಧರ್ಮ ಸಂದೇಶ ನೀಡಿದ ನೂತನ ಚನ್ನವೀರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಬದುಕಿ ಬಾಳುವ ಮನುಷ್ಯನಿಗೆ ಧರ್ಮ ದಿಕ್ಸೂಚಿ. ವೀರಶೈವ ಧರ್ಮದ ಆದರ್ಶ ಚಿಂತನಗಳನ್ನು ಮೈಗೂಡಿಸಿಕೊಂಡು ಧರ್ಮ ಸಂಸ್ಕೃತಿ ಪರಂಪರೆ ಮತ್ತು ಸಾಮಾಜಿಕ ಸತ್ಕಾರ್ಯಗಳನ್ನು ನೆರವೇರಿಸಿಕೊಂಡು ಬರುವ ಸತ್ಯ ಸಂಕಲ್ಪ ನಮ್ಮದಾಗಿದೆ. ಈ ದಿಶೆಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನ ಸದಾ ಇರಲೆಂದು ಪ್ರಾರ್ಥಿಸಿದರು.