ವಿಜಯಸಾಕ್ಷಿ ಸುದ್ದಿ, ಡಂಬಳ : ಪ್ರತೀ ವರ್ಷ 2 ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವದಾಗಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಯುವಕರನ್ನು ಯಾಮಾರಿಸಿದ್ದಾರೆ. ಇಂತಹ ವಚನಭ್ರಷ್ಟ ಸರ್ಕಾರವನ್ನು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಡಿ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಡಂಬಳ ಹೋಬಳಿಯ ಡೋಣಿ ಗ್ರಾಮದಲ್ಲಿ ವಿವಿಧ ಯೋಜನೆಗಳಡಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಟ್ಟಡದ ಗುದ್ದಲಿ ಪೂಜೆ, ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಿಂದ ಮುಖ್ಯ ರಸ್ತೆಯವರೆಗೆ ಸಿ.ಸಿ. ರಸ್ತೆ, ಗ್ರಂಥಾಲಯ ಕಟ್ಟಡ ಉದ್ಘಾಟನೆ, ಶ್ರೀ ಸದ್ಗುರು ಹಾಲೇಶ್ವರ ಆಶ್ರಮದ ಆವರಣದಲ್ಲಿ ಯಾತ್ರಿ ನಿವಾಸ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ರಾಜ್ಯ ಸರ್ಕಾರದಿಂದ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡುವ ಮೂಲಕ ಶೈಕ್ಷಣಿಕ ರಂಗಕ್ಕೆ ಶಕ್ತಿ ತುಂಬಿ, ದೇಶದ ಶಕ್ತಿಯನ್ನು ಹೆಚ್ಚಿಸುವ ಕಾರ್ಯ ಕೈಗೊಳ್ಳುತ್ತಿದೆ ಎಂದು ಹೇಳಿದರು.
ಮುಂಡರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ರೋಣ ಪುರಸಭೆ ಉಪಾಧ್ಯಕ್ಷ ಮಿಥುನ ಜಿ.ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಕಡುಬಡವರಿಗೆ, ಕಾರ್ಮಿಕರಿಗೆ, ರೈತರಿಗೆ, ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುವುದರ ಮೂಲಕ ಒಂದು ವರ್ಷದಲ್ಲಿ ಒಂದು ಕುಟುಂಬಕ್ಕೆ 45 ಸಾವಿರ ರೂ ಹಣ ವರ್ಗಾವಣೆಯಾಗುತ್ತಿದೆ. ಬಡವರ ಪರ ಕಾಳಜಿ ವಹಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರು ಬರುವ ಎಲ್ಲಾ ಚುನಾವಣೆಗಳಲ್ಲಿ ರಾಜಕೀಯ ಶಕ್ತಿ ತುಂಬಲು ಬೆಂಬಲವಾಗಿರಬೇಕೆಂದು ಮನವಿ ಮಾಡಿದರು.
ಸಾನಿಧ್ಯ ವಹಿಸಿದ್ದ ಶ್ರೀ ಅಮೃತೇಶ್ವರ ಹಾಲಸೋಮೇಶ್ವರ ಶ್ರೀಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಲಲಿತಾ ಕುಂಬಾರ, ಉಪಾಧ್ಯಕ್ಷೆ ನಾಗರತ್ನ ವಡ್ಡರ, ಗೋಣಿಬಸಪ್ಪ ಕೊರ್ಲಹಳ್ಳಿ, ಶಾಂತವೀರಗೌಡ ಹೊಸಮನಿ, ಜಗದೀಶ ಮೈನಳ್ಳಿ, ಗುರಣ್ಣ ಕುರ್ತುಕೋಟಿ, ನಾಗರಾಜ ಸಜ್ಜನರ, ಬಿ.ಎಸ್. ಕೆರಿ, ಈಶಣ್ಣ ಓಲಿ, ಮಳ್ಳಪ್ಪ ಜೋಂಡಿ, ಒಂಟೆಲ್ಲಪ್ಪ ಒಡ್ಡರ, ಕಾಶಪ್ಪ ಅಳವುಂಡಿ, ಈರಪ್ಪ ಯಳವತ್ತಿ, ಬಸುರಾಜ ಪೂಜಾರ, ರಾಮಣ್ಣ ಮೇಗಲಮನಿ, ಭರಮಪ್ಪ ಕಿಲಾರಿ, ಪರಸುರಾಮ ಒಡ್ಡರ, ತಹಸೀಲ್ದಾರ ಧನಂಜಯ ಮಾಲಗಿತ್ತಿ, ಇಓ ವಿಶ್ವಾನಾಥ ಹೋಸಮನಿ, ಪಿಡಬ್ಲ್ಯೂಡಿಯ ನಾಗೇಂದ್ರ ಪಟ್ಟಣಶೆಟ್ಟರ, ಡಿಡಿಪಿಐ ಎಮ್.ಎ. ರಡ್ಡೇರ, ಸಮಾಜ ಕಲ್ಯಾಣ ಅಧಿಕಾರಿ ಉದಯಕುಮಾರ ಯಲಿವಾಳ, ಎಚ್.ಎಮ್. ಪಡ್ನೆಸ್, ಗಂಗಾದರ ಅಣ್ಣಿಗೇರಿ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಇದ್ದರು.
ಹತ್ತು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರೈತರ ಸಾಲ ಮನ್ನಾ ಮಾಡಿಲ್ಲವಾದರೂ, ಶ್ರೀಮಂತರ 10 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡುವ ಮೂಲಕ ಕೇಂದ್ರ ಸರ್ಕಾರ ಬಡವರ ಪರವಲ್ಲ, ಬಂಡವಾಳಶಾಹಿಗಳ ಪರ ಎಂಬುದನ್ನು ಸಾಬೀತು ಮಾಡಿದೆ. ಆದರೆ, ಕೇಂದ್ರದಲ್ಲಿ ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ದೇಶಾದ್ಯಂತ ಎಲ್ಲಾ ಹಂತದ ರೈತರ ಸಾಲ ಮನ್ನಾ ಮಾಡಿ ರೈತರ ಪರವಾಗಿ ನಿಂತಿದ್ದರು. ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಮಾತಿನಂತೆ ಜಾರಿಗೊಳಿಸಿ, ಜನಪರ ಸರ್ಕಾರವೆನಿಸಿದೆ.
– ಜಿ.ಎಸ್. ಪಾಟೀಲ.
ಶಾಸಕರು, ಖನಿಜ ನಿಗಮದ ಅಧ್ಯಕ್ಷರು.