ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ತಿಮ್ಮಾಪೂರ ಗ್ರಾಮದ ಲಾಸ್ಟ್ ಪಂಚ್ ಖ್ಯಾತಿಯ ಬರಹಗಾರ ಹಾಗೂ ಬೆಂಗಳೂರಿನ ಬೈಟ್ಸ್ ಕಂಪನಿಯ ಪ್ರೋಗ್ರಾಮ್ ಲೀಡ್ ಡಾ. ಭಾರ್ಗವ ಎಚ್.ಕೆ ಅವರು ಮಂಡಿಸಿದ `ರೆಕಗ್ನಿಶನ್ ಅಂಡ್ ಕರೆಕ್ಷನ್ ಆಫ್ ಕನ್ನಡ ಹ್ಯಾಂಡ್ ರಿಟನ್ ಡಾಕ್ಯುಮೆಂಟ್ಸ್ ವಿತ್ ಸ್ಟ್ರೈಕ್ ಔಟ್ಸ್ ಅಂಡ್ ಅನ್ನೋಟೇಶನ್ಸ್’ ಎಂಬ ಪ್ರಬಂಧಕ್ಕೆ ಬೆಳಗಾವಿಯ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದುಕೊಂಡಿದ್ದಾರೆ.
ಇವರಿಗೆ ಡಾ.ಶಿವಯೋಗಿ ಬಿ.ಯು ಮಾರ್ಗದರ್ಶಕರಾಗಿದ್ದರು. ಲಕ್ಷ್ಮೇಶ್ವರದ ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 12 ವರ್ಷಗಳ ಕಾಲ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾಮದ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಈ ಬಗ್ಗೆ ಸಂತಸ ವ್ಯಕ್ತಪಡಿಸಿ, ಭಾರ್ಗವ ಅವರು ನಮ್ಮ ಸಹಪಾಠಿ, ಶಾಲಾ ಕಾಲೇಜು ದಿನಗಳಲ್ಲಿ ಪ್ರತಿಭಾವಂತ ವ್ಯಕ್ತಿಯಾಗಿದ್ದರು. ತಿಮ್ಮಾಪೂರ ಗ್ರಾಮವು ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಸದೃಢವಾಗಿರುವ ಗ್ರಾಮ. ಗದಗ ಜಿಲ್ಲೆಯಲ್ಲೇ ವರ್ಚಸ್ಸು ಪಡೆದ ಗ್ರಾಮವೆಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಹೇಳಿದರು.
ಭಾರ್ಗವ ಕೆ.ಎಚ್. ಅವರಿಗೆ ಸ್ನೇಹಿತರಾದ ಜಗದೀಶ, ಶ್ರೀಕಾಂತ ಕಟಗಿ, ಕುಬೇರಪ್ಪ ಜೋಗಿನ, ಹಾಲಪ್ಪ ಗದಗ, ಇಸ್ಮಾಯಿಲ್ ನದಾಫ, ರವಿ ಗುಡ್ಲಾನೂರ, ನಿಂಗಪ್ಪ ಗುಡ್ಲಾನೂರ ಸೇರಿದಂತೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.



