ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸರ್ಕಾರದ ಕಾರ್ಯಕ್ರಮಗಳು ಇರುವುದು ಬಡವರ ಏಳಿಗೆಗಾಗಿ. ಹಾಗಾಗಿ ಎಲ್ಲಿ ನಿಜವಾಗಿಯೂ ಅಭಿವೃದ್ಧಿಯ ಅವಶ್ಯಕತೆ ಇರುತ್ತದೆಯೋ ಅಲ್ಲಿಗೆ ಬಂದು ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದೇವೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಪಟ್ಟಣದ 3ನೇ ವಾರ್ಡಿನ ಬುಲ್ಡೋಜರ್ ನಗರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದಡಿ ನಡೆದ ರೂ. 50 ಲಕ್ಷ ವೆಚ್ಚದ ಸಿ.ಸಿ. ರಸ್ತೆ ಅಭಿüವೃದ್ಧಿ ಕಾರ್ಯಕ್ರಮದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಾಗಿ ಸಾಕಷ್ಟು ಖರ್ಚಾಗುತ್ತಿದ್ದರೂ ಸಹ ಯಾವುದೇ ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ಹಾಗೂ ರೋಣ ಮತ ಕ್ಷೇತ್ರದಲ್ಲಿ ನಿಂತಿಲ್ಲ. ಯಾಕೆಂದರೆ ಇದು ಬಡವರಿಗಾಗಿ, ಬಡವರಿಗೋಸ್ಕರ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಶಹರ ಘಟಕದ ಅಧ್ಯಕ್ಷ ಶಿವನಗೌಡ ಪಾಟೀಲ ಮಾತನಾಡಿ, ಜಿ.ಎಸ್. ಪಾಟೀಲರು ಶಾಸಕರಾಗಿ ಆಯ್ಕೆಯಾದಾಗ ಮಾತ್ರ ಬುಲ್ಡೋಜರ್ ನಗರಕ್ಕೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದು ಇಲ್ಲಿನ ಜನರು ನೋಡುತ್ತಿದ್ದಾರೆ. ಹಾಗಾಗಿ ಪ್ರತೀ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಈ ವಾರ್ಡಿನ ಜನರು ಆಶೀರ್ವಾದ ಮಾಡುತ್ತಾರೆ ಎಂದರು.
ಮುಖಂಡರಾದ ಶೇಖಪ್ಪ ಕೆಂಗಾರ, ಹನಮಂತಪ್ಪ ಅಬ್ಬಿಗೇರಿ, ದಾದಾಸಾಬ್ ನದಾಫ್, ಸಂತೋಷ ಹನಮಸಾಗರ, ಮುತ್ತಪ್ಪ ನೂಲ್ಕಿ, ಬಸವರಾಜ, ಶೇಖಪ್ಪ ಜುಟ್ಲ, ಮೈಲಾರಪ್ಪ ವೀ.ಚಳ್ಳಮರದ, ಕಳಕನಗೌಡ ಪೊಲೀಸ್ ಪಾಟೀಲ, ರೇಣುಕಾ ಧರ್ಮಾಯತ ಇದ್ದರು.