ವಿಜಯಸಾಕ್ಷಿ ಸುದ್ದಿ, ಗದಗ : ಮಹಿಳಾ ದಿನಾಚರಣೆ ಎಂದರೆ ಗಂಡು-ಹೆಣ್ಣು, ಮೇಲು-ಕೀಳು ಎಂದು ವಾದ ಮಾಡದೇ ಹೆಣ್ಣು ಗಂಡಿಗಿಂತ ಹೇಗೆ ವಿಭಿನ್ನ ಎಂಬುದನ್ನು ಅರಿತುಕೊಳ್ಳುವುದೇ ಆಗಿದೆ. ಅದೇ ರೀತಿ ನಮ್ಮ ಸಾಧನೆಗೆ ಸ್ಫೂರ್ತಿಯಾದ ಮತ್ತು ಸಾಧನೆಯ ದಾರಿಯನ್ನು ಸುಗಮಗೊಳಿಸಿದ ನಮ್ಮ ಇಂದಿನ ಮಹಿಳಾ ಸಾಧನೆಯನ್ನು ನೆನಪಿಸಿಕೊಳ್ಳುವುದೇ ಮಹಿಳಾ ದಿನಾಚರಣೆಯಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ ಅಭಿಪ್ರಾಯಪಟ್ಟರು.
ಮಹಿಳಾ ದಿನಾಚರಣೆ ಅಂಗವಾಗಿ ನಗರದ ಸಂಕನೂರ ಶುಶ್ರೂಷಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶ್ವೇತಾ ಸಂಕನೂರ ಮಾತನಾಡಿ, ಮಹಿಳೆಯು ಮನೆಯ ಜವಾಬ್ದಾರಿ ವಹಿಸಿಕೊಂಡು ತನ್ನ ಗುರಿ ತಲುಪುವವರೆಗೆ ಬಿಡುವುದಿಲ್ಲ. ಅವಳ ಸಾಧನೆ, ಕೆಲಸಗಳನ್ನು ನಾವು ಗೌರವಿಸುವುದೇ ನಿಜವಾದ ಸ್ತ್ರೀಪೂಜೆಯಾಗಿದೆ ಎಂದರು.
ಪ್ರಾಂಶುಪಾಲರಾದ ಡಾ. ಮೀನಾಕ್ಷಿ ದೇವಾಂಗಮಠ ಮಾತನಾಡಿ, ಮಹಿಳೆಯರು ಎಲ್ಲ ಕಾರ್ಯಕ್ಷೇತ್ರಗಳಲ್ಲೂ ಮುಂಚುಣಿಯಲ್ಲಿದ್ದಾರೆ ಎಂದರು. ಉಪನ್ಯಾಸಕಿ ಕವಿತಾ ಪವಾರ ಅತಿಥಿಗಳನ್ನು ಪರಿಚಯಿಸಿದರು. ಬಸವರಾಜ ಲಮಾಣಿ ಸ್ವಾಗತಿಸಿದರು. ಗುರುಕಿರಣ ನಿರೂಪಿಸಿದರು. ಮುಸ್ತುಫಾ ಮುಲ್ಲಾ ವಂದಿಸಿದರು.