ವಿಜಯಸಾಕ್ಷಿ ಸುದ್ದಿ, ಗದಗ : ನಾಲತವಾಡದ ವೀರೇಶ್ವರ ಶರಣರು ಶಿಕ್ಷಕರಾಗಿ, ಕೃಷಿಕರಾಗಿ ಜಂಗಮ ದಾಸೋಹದಲ್ಲಿ ನಿರತರಾಗಿದ್ದರು. ಗ್ರಾಮ ದೇವತೆಯ ಜಾತ್ರೆಯಲ್ಲಿ ಪ್ರಾಣಿಬಲಿ ಕೊಡುವುದನ್ನು ವಿರೋಧಿಸಿದರು.
ಅವರು ಹುಟ್ಟಿ ಬೆಳೆದದ್ದು ನಾಲತವಾಡವಾದರೂ ಸಾಧನೆ ಮಾಡಿದ ಕ್ಷೇತ್ರ ಸೋಲಾಪುರದಲ್ಲಿ ಎಂದು ಅಳವಂಡಿಯ ಸಿದ್ದೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠದ ಮರುಳಾರಾದ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ನರಸಾಪೂರ ಗ್ರಾಮದ ನಾಲತವಾಡ ವೀರೇಶ್ವರ ಶರಣರ ಮಠದಲ್ಲಿ ವೀರೇಶ್ವರ ಶರಣರ ಜಯಂತ್ಯುತ್ಸವ, ಮಹಾರಥೋತ್ಸವ ಹಾಗೂ ಚಂದ್ರಶೇಖರ ಶರಣರ 11ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮೂಢನಂಬಿಕೆಯನ್ನು ಬುಡ ಸಮೇತ ಕಿತ್ತೊಗೆಯಬೇಕು. ಸರ್ವ ಸಮಾಜದಲ್ಲಿ ಸಮನ್ವಯತೆ, ಸಹಕಾರ ಮೂಡಿಸಿ, ಜಾತಿ, ಬೇಧ-ಭಾವಗಳನ್ನು ತೊಲಗಿಸುವಲ್ಲಿ ತಮ್ಮ ದಿನ ನಿತ್ಯದ ಕಾಯಕದೊಂದಿಗೆ ಅವಿರತವಾಗಿ ಶ್ರಮಿಸಿದರು. ವೀರೇಶ್ವರ ಶರಣರು ದೇಹ ತೊರೆಯುವವರೆಗೂ ಸಂಕಷ್ಟದ ಬದುಕನ್ನೇ ನಡೆಸಿದರು ಎಂದು ಹೇಳಿದರು.
ಇದಕ್ಕೂ ಮುನ್ನ ಬೆಳಿಗ್ಗೆ ಷಟಸ್ಥಲ ಧ್ವಜಾರೋಹಣ, ವೀರೇಶ್ವರ ಶರಣರ ಹಾಗೂ ಚಂದ್ರಶೇಖರ ಶರಣರ ಮೂರ್ತಿಗಳಿಗೆ ಮಹಾರುದ್ರಾಭಿಷೇಕ ನಂತರ ಚಂದ್ರಶೇಖರ ಶರಣರ ಪುಣ್ಯಸ್ಮರಣೋತ್ಸವ, ಮಹೇಶ ಕುಂದ್ರಾಳಹಿರೇಮಠರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಕಳಕಮಲ್ಲಯ್ಯ ಹಿರೇಮಠ, ಕೆ.ಎಸ್. ಹಿರೇಮಠ, ಡಾ. ನಾಗರತ್ನಮ್ಮ, ಉಮೇಶ ಶಿವಶಿಂಪರ ಸೇರಿ ಅನೇಕರು ಇದ್ದರು. ಎಸ್.ಐ. ಪಾಟೀಲ ಸ್ವಾಗತಿಸಿದರು. ಡಾ. ಸುಜಾತಾ ಪಾಟಿಲ ಪ್ರಾಸ್ತಾವಿಕ ಮಾತನಾಡಿದರು. ಬಿ.ಎಲ್. ಹೊಸಳ್ಳಿಹಿರೇಮಠ ನಿರೂಪಿಸಿದರು. ಲಿಂಗರಾಜ್ ಕಬ್ಬೂರ ವಂದಿಸಿದರು.
ಶ್ರೀಮಠದ ಪೀಠಾಧಿಪತಿ ಶಿವಕುಮಾರ ಶರಣರು ಮಾತನಾಡಿ, ವೀರೇಶ್ವರ ಶರಣರು ತಮ್ಮ ಕಾಯಕದ ಮೂಲಕ ಬಂದ ಹಣವನ್ನು ದಾಸೋಹ ನಡೆಸುತ್ತಿದ್ದರು. ನಂತರ ವೀರೇಶ್ವರ ಶರಣರ ಪ್ರೇರಣೆಯಿಂದ ಚಂದ್ರಶೇಖರ ಶರಣರು ನರಸಾಪೂರ ಗ್ರಾಮದಲ್ಲಿ ೧೯೭೪ರಲ್ಲಿ ವೀರೇಶ್ವರ ಶರಣರ ಮಠವನ್ನು ಸ್ಥಾಪಿಸಿ ನಿತ್ಯ ಪೂಜಾ ಕೈಂಕರ್ಯಗಳನ್ನು ನಡೆಸುತ್ತ, ಭಕ್ತರ ಸಮಸ್ಯೆಗಳನ್ನು ಪರಿಹರಿಸುತ್ತ ಶ್ರೀಮಠವನ್ನು ಮುನ್ನಡೆಸಿಕೊಂಡು ಬಂದರು ಎಂದರು.