ವಿಜಯಸಾಕ್ಷಿ ಸುದ್ದಿ, ಗದಗ : ಕಿಡ್ನಿ ಸ್ವಾಸ್ತ್ಯಕ್ಕಾಗಿ ನಾವಿಂದು ನಮ್ಮ ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಳ್ಳಲು ಸಂಕಲ್ಪ ಮಾಡುವ ಅಗತ್ಯ ಹಾಗೂ ಅನಿವಾರ್ಯತೆಯಿದೆ ಎಂದು ಗದುಗಿನ ಹಿರಿಯ ತಜ್ಞ ವೈದ್ಯ ಡಾ.ಕುಶಾಲ ಗೋಡಖಿಂಡಿ ಅಭಿಪ್ರಾಯಪಟ್ಟರು.
ಅವರು ಗುರುವಾರ ಗದುಗಿನ ಸಂಕಲ್ಪ ಕಿಡ್ನಿ ಕೇರ್‌ನಲ್ಲಿ ಏರ್ಪಡಿಸಿದ್ದ ವಿಶ್ವ ಕಿಡ್ನಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮನುಷ್ಯನ ದೇಹ ರಚನೆಯಲ್ಲಿ ಮೂತ್ರಪಿಂಡ ಅತ್ಯಂತ ಮಹತ್ವದ್ದಾಗಿದೆ. ದೇಹದಲ್ಲಿನ ನಿರುಪಯುಕ್ತ ದ್ರವ ಪದಾರ್ಥವನ್ನು ಹೊರಹಾಕುವಲ್ಲಿ ಈ ಮೂತ್ರಪಿಂಡಗಳು ಪರಿಣಾಮಕಾರಿ ಕಾರ್ಯ ಮಾಡುವವು. ಕಿಡ್ನಿಯನ್ನು ಫಿಲ್ಟರ್ ಎಂದೆನ್ನಬಹುದು. ಕಿಡ್ನಿಯಲ್ಲಿ ತೊಂದರೆಗಳು ಕಂಡು ಬಂದಲ್ಲಿ ಆರೋಗ್ಯದ ಮೇಲೆ ಪರಿಣಾಮವಾಗುತ್ತದೆ. ಆಗಾಗ ತಜ್ಞ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಮೂತ್ರದಲ್ಲಿ ರಕ್ತ ಬಂದರೆ ಅಲಕ್ಷ್ಯ ಬೇಡ. ಅಧಿಕ ರಕ್ತದೊತ್ತಡ ಹಾಗೂ ನೋವು ನಿವಾರಕ ಮಾತ್ರೆಗಳ ಸೇವನೆಯಿಂದ ಕಿಡ್ನಿ ಹಾನಿಯಾಗುವದು. ಆದ್ದರಿಂದ ಸದೃಢ ಆರೋಗ್ಯದಿಂದ ಸದೃಢ ಕಿಡ್ನಿ ರೂಪುಗೊಳ್ಳಲು ಸಾಧ್ಯ.
ನಿಯಮಿತ ಆಹಾರ-ನೀರು ಸೇವನೆ, ಲಘು ವ್ಯಾಯಾಮ, ವಾಯುವಿಹಾರ ಮಾಡಿ ಎಂದರಲ್ಲದೆ, ಕಿಡ್ನಿ ಕಸಿ ಮಾಡಲು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳು ಬಂದಿದೆ ಎಂದರು.
ಅತಿಥಿಯಾಗಿ ಆಗಮಿಸಿದ್ದ ವಿದ್ಯಾದಾನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ಗದಗ ಪರಿಸರದಲ್ಲಿ ಸಂಕಲ್ಪ ಕಿಡ್ನಿ ಕೇರ್ ಸೆಂಟರ್ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ಸಂಕಲ್ಪ ಕಿಡ್ನಿ ಕೇರ್‌ನ ಡಾ.ಅವಿನಾಶ್ ಓದುಗೌಡರ ಕಿಡ್ನಿ ಸಂರಕ್ಷಣೆ, ಮುಂಜಾಗ್ರತಾ ಕ್ರಮ, ಕಿಡ್ನಿ ಕಸಿ, ವೈದ್ಯಕೀಯ ಆರೈಕೆ ವಿಷಯವಾಗಿ ವಿಶ್ಲೇಷಿಸಿ ಮಾತನಾಡಿದರಲ್ಲದೆ, ಗದುಗಿನಲ್ಲಿ ಕಿಡ್ನಿ ಕಸಿ ವೈದ್ಯಕೀಯ ಚಿಕಿತ್ಸೆಯು ಹುಲಕೋಟಿಯ ಕೆ.ಎಚ್. ಪಾಟೀಲ ಆಸ್ಪತ್ರೆ ಹಾಗೂ ಸಂಕಲ್ಪ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ಆರಂಭಗೊಳ್ಳಲಿದೆ. ಇದು ಗದಗ ಜಿಲ್ಲೆಯಲ್ಲಿಯೇ ಪ್ರಪ್ರಥಮ ಪ್ರಯತ್ನವಾಗಿದೆ ಎಂದರು.
ಡಾ.ನಮೃತಾ ಬಾಲರಡ್ಡಿ ಸ್ವಾಗತಿಸಿದರು. ಡಾ.ಮೇಘನಾ ಹಿಪ್ಪರಗಿ ನಿರೂಪಿಸಿದರು. ಕೊನೆಗೆ ಡಾ.ಮಹಾಲಕ್ಷ್ಮಿ ಕೋಳಿವಾಡ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ.ದೀಪಕ ಕುರಹಟ್ಟಿ, ಡಾ.ಪವನ ಕೋಳಿವಾಡ, ಡಾ.ಶಿವಕುಮಾರ ಪವಾಡಶೆಟ್ಟರ, ಡಾ.ಶಿಲ್ಪಾ ಪವಾಡಶೆಟ್ಟರ ಮುಂತಾದವರಿದ್ದರು.
ಆರಂಭದಲ್ಲಿ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳ ತಂಡದಿAದ ಕಿಡ್ನಿ ಜಾಗೃತಿ ಮೂಡಿಸುವ ಅಣಕು ಪ್ರದರ್ಶನ ನಡೆಯಿತು. ನರ್ಸಿಂಗ್ ಕಾಲೇಜ್, ಸ್ಪರ್ಶಾ ಕಾಲೇಜ್, ಕೆ.ಎಚ್. ಪಾಟೀಲ ನರ್ಸಿಂಗ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು, ಗಣ್ಯಮಾನ್ಯರು, ರೋಗಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗದಗ ಐಎಂಎ ಮಾಜಿ ಅಧ್ಯಕ್ಷ ಡಾ.ಪ್ಯಾರಅಲಿ ನೂರಾನಿ ಹಾಗೂ ಡಾ.ಶರಣ ಆಲೂರ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಂದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಕಿಡ್ನಿ ಕಸಿ ಮಾಡುವದು ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಸುಲಭಗೊಳಿಸಲಾಗಿದೆ ಎಂದರು.