ವಿಜಯಸಾಕ್ಷಿ ಸುದ್ದಿ, ಗದಗ : ಜೀವನದ ಸರಿಯಾದ ಸಾರವನ್ನು ಪ್ರವಚನಗಳ ಮೂಲಕ ತಿಳಿದುಕೊಂಡು ಆಧ್ಯಾತ್ಮಿಕ ಜ್ಞಾನ, ಶಿವಜ್ಞಾನವನ್ನು ಪಡದುಕೊಂಡರೆ ನಮ್ಮ ಬದುಕು ಬೆಳಗಬಲ್ಲದು ಎಂದು ನರೇಗಲ್ಲದ ಮಲ್ಲಿಕಾರ್ಜುನ ಶಿವಾಚಾರ್ಯರು ತಿಳಿಸಿದರು.
ನಗರದ ಮುಳಗುಂದ ನಾಕಾ ಬಳಿ ಇರುವ ಶ್ರೀ ರೇಣುಕ ಮಂದಿರದಲ್ಲಿ ರೇಣುಕಾಚಾರ್ಯ ಜಯಂತಿ ಹಾಗೂ ರಥೋತ್ಸವ ನಿಮಿತ್ಯ ಹಮ್ಮಿಕೊಂಡಿರುವ ಶ್ರೀ ರೇಣುಕ ದರ್ಶನ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ವೀರಶೈವ ಧರ್ಮದ ಸಂಸ್ಥಾಪಕರಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ದಶಸೂತ್ರಗಳು ಮನುಷ್ಯನ ಅಜ್ಞಾನದ ಕತ್ತಲೆಯನ್ನು ಪೂರ್ಣಚಂದ್ರಿಕೆಯು ದಾರಿ ತೋರುವಂತೆ ರೇಣುಕರ ಉಪದೇಶಗಳು ಸರ್ವರಿಗೂ ಮಾರ್ಗದರ್ಶಕವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಿರಣ ಭೂಮಾ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂತೋಷ ಚನ್ನಪ್ಪನವರ, ನಾರಾಯಣ ಕುಡತರಕರ, ಡಾ. ಗಚ್ಚಿನಮಠರನ್ನು ಸನ್ಮಾನಿಸಲಾಯಿತು.
ರೇಣುಕ ದರ್ಶನದ ಪ್ರಥಮ ದಿನದ ಪ್ರವಚನವನ್ನು ನವನಗರದ ರಾಜಶೇಖರ ಶಿವಾಚಾರ್ಯರು ಪ್ರಾರಂಭದ ನುಡಿಗಳನ್ನಾಡಿದರು. ಜಗದ್ಗುರು ಪಂಚಾಚಾರ್ಯ ಸೇವಾ ಸಂಘದ ಉಪಾಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡುತ್ತ, 83 ವರ್ಷದ ಹಿಂದೆ ರಂಭಾಪುರಿ ಶ್ರೀ ವೀರ ಗಂಗಾಧರ ಜಗದ್ಗುರುಗಳ ಅಮೃತ ಹಸ್ತದಿಂದ ಪ್ರಾರಂಭವಾದ ಸಂಘವು ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ಪ್ರತಿ ವರುಷ ಸಂಘದಿಂದ ರೇಣುಕಾಚಾರ್ಯ ಜಯಂತಿ ರಥೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿರುವುದನ್ನು ಸ್ಮರಿಸಿದರು.
ಪ್ರಾರಂಭದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ ಪಾಠಶಾಲೆಯ ವಟುಗಳು ವೇದಘೋಷ ಮಾಡಿದರು. ಮಹೇಶ ಕುಂದ್ರಾಳಹಿರೇಮಠರಿಂದ ಭಕ್ತಿ ಸಂಗೀತ ಸುಧೆ ಜರುಗಿತು. ಜಗದ್ಗುರು ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷರಾದ ಮಂಜುನಾಥ ಬೇಲೇರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಿ. ಕೆ. ಗುರುಮಠ ನಿರೂಪಿಸಿದರು. ವೇ. ಮೂ. ಮಹೇಶ್ವರಸ್ವಾಮಿ ಹೊಸಳ್ಳಿಮಠ ವೇದಿಕೆ ಮೇಲೆ ಉಪಸ್ಥಿತರಿದ್ದರು. ಭಕ್ತಿ ಸೇವೆ ವಹಿಸಿಕೊಂಡಿದ್ದ ಮಹೇಶ ಅಬ್ಬಿಗೇರಿ, ಯು. ಆರ್. ಭೂಸನೂರಮಠ, ಶ್ರೀಕಾಂತ ಲಕ್ಕುಂಡಿ, ಸಿ. ಬಿ. ಹಿರೇಗೌಡ್ರ ರಾಜಣ್ಣ ಮಲ್ಲಾಡದ, ಸಿ. ಜಿ. ಅಬ್ಬಿಗೇರಿಮಠ, ಎಸ್. ಎಸ್. ಮೇಟಿ ಇವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಠಶಾಲೆಯ ಪ್ರಾಧ್ಯಾಪಕ ಗುರುಸಿದ್ದಯ್ಯ ಹಿರೇಮಠ, ಸುರೇಶ ಅಬ್ಬಿಗೇರಿ, ಪ್ರಭು ದಂಡಾವತಿಮಠ, ವಿರೇಶ ಕೂಗು, ಬಸಯ್ಯ ಸಾಸ್ವಿಹಳ್ಳಿಮಠ, ಸಿದ್ದಲಿಂಗಪ್ಪ ಚಳಗೇರಿ, ವಿಜಯಕುಮಾರ ಹಿರೇಮಠ, ರಾಜು ಮುಧೋಳ, ವೀರಣ್ಣ ಧನ್ನೂರಹೀರೆಮಠ, ಮಹಿಳಾ ಘಟಕ ಪದಾಧಿಕಾರಿಗಳು ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಪ್ರವಚನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿದ ಗಣ್ಯ ಉದ್ಯಮಿ, ದತ್ತಾ ಡೆವಲರ‍್ಸ್ ನ ಎಂಡಿ ಕಿರಣ ಭೂಮಾ ಮಾತನಾಡಿ, ಪ್ರತಿ ವರುಷ ಪ್ರವಚನ ಏರ್ಪಡಿಸುತ್ತಿರುವುದು ಬಹಳ ಸಂತೋಷ. ರಂಭಾಪುರಿ ಪೀಠದ ಧ್ಯೇಯ ವಾಕ್ಯವಾದ `ಮಾನವ ಧರ್ಮಕ್ಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎನ್ನುವುದು ಎಲ್ಲರನ್ನೂ ಎಚ್ಚರಿಸುತ್ತದೆ. ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ವಿಶಾಲ ದೃಷ್ಟಿಕೋನ ಎಲ್ಲರ ಹೃದಯ ಅರಳುವಂತೆ ಮಾಡುತ್ತದೆ ಎಂದರು.
Advertisement