ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕ ಹುದ್ದೆಗೆ ಮಹತ್ವದ ಸ್ಥಾನವಿದ್ದು, ದೇಶದ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ. ಸಂಕನೂರ ನುಡಿದರು.
ಅವರು ಇತ್ತೀಚೆಗೆ ನಗರದ ತೋಂಟದಾರ್ಯ ವಿದ್ಯಾಪೀಠದ ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಿದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಯ ವ್ಯಕ್ತಿತ್ವ ನಾಲ್ಕು ಗೋಡೆಯ ಮಧ್ಯದ ವರ್ಗಕೋಣೆಯಲ್ಲಿ ನಿರ್ಮಾಣವಾಗುತ್ತದೆ. ಈ ಕೆಲಸ ಮಾಡಬೇಕಿರುವ ಶಿಕ್ಷಕರು ತಮ್ಮ ವಿಷಯಗಳ ಜೊತೆಗೆ ಮಕ್ಕಳಲ್ಲಿ ಜೀವನ ಮೌಲ್ಯಗಳನ್ನು ಬಿತ್ತಬೇಕು. ಕೇವಲ ಸಾಧಾರಣ ಶಿಕ್ಷಕರಾಗದೇ ಬೋಧನಾ ಕೌಶಲ್ಯಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ಆದರ್ಶ ಶಿಕ್ಷಕರಾಗಲು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಸ್.ಪಿ. ಗೌಳಿ ಮಾತನಾಡಿ, ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಕೃಪಾರ್ಶೀವಾದದಿಂದ ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್.ಎಸ್. ಪಟ್ಟಣಶೆಟ್ಟರ ಕರ್ತೃತ್ವಶಕ್ತಿಯಿಂದ ಆರಂಭವಾದ ಕಾಲೇಜು ಇದಾಗಿದ್ದು, ಪ್ರಶಿಕ್ಷಣಾರ್ಥಿಗಳು ಸಂಸ್ಥೆಯ ಪಾವಿತ್ರ್ಯತೆಗೆ ಹಾಗೂ ತಮ್ಮ ಚಾರಿತ್ರ್ಯಕ್ಕೆ ಧಕ್ಕೆ ಬಾರದಂತೆ ನಡೆದುಕೊಂಡು ಉತ್ತಮ ಶಿಕ್ಷಕರಾಗಿ ಹೊರಹೊಮ್ಮಿ ಎಂದು ಆಶಿಸಿದರು.
2023-24ನೇ ಸಾಲಿನ ವಿದ್ಯಾರ್ಥಿ ಒಕ್ಕೂಟಕ್ಕೆ ಆಯ್ಕೆಯಾದ ಪ್ರಶಿಕ್ಷಣಾರ್ಥಿಗಳಿಗೆ ಉಪನ್ಯಾಸಕ ಎಂ.ಎಂ. ನದಾಫ ಪ್ರಮಾಣ ವಚನ ಬೋಧಿಸಿದರು. ಎಂ.ಕೆ. ಬಂಡಿಹಾಳ ಹಾಗೂ ಎಸ್.ಎಚ್. ರಾಮದುರ್ಗ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸವಿತಾ ಹಾಗೂ ಸಂಗಡಿಗರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಪ್ರಶಿಕ್ಷಣಾರ್ಥಿ ಹೇಮಾ ನೀಲಗುಂದ ಪ್ರಾಸ್ತಾವಿಕವಾಗಿ ಮಾತನಾಡಿದಳು. ಪ್ರತಿಭಾ ರಬಜ್ಜನವರ ಹಾಗೂ ಶಿಲ್ಪಾ ಕಡಿವಾಳ ನಿರೂಪಿಸಿದರು. ರಂಗಪ್ಪ ಉಡಚಂಚಿ ವಂದಿಸಿದರು. ಉಪನ್ಯಾಸಕರಾದ ಡಾ.ಗಿರಿಜಾ ಹಸಬಿ, ಕಲಾವತಿ ಸಂಕನಗೌಡರ, ಎಂ.ವೈ. ಸೈದಾಪೂರ, ಲತಾ ಹಂಡಿ ಸೇರಿದಂತೆ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.