ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ
ಲೋಕಸಭಾ ಚುನಾವಣೆ ಘೋಷಣೆಯ ನಂತರ ಮತದಾರರನ್ನು ಸೆಳೆಯಲು ನಾನಾ ರಾಜಕೀಯ ಪಕ್ಷಗಳ ನಡೆಸುವ ವಾಮಮಾರ್ಗಳಿಗೆ ಬ್ರೇಕ್ ಹಾಕಲು ಗದಗ ಜಿಲ್ಲಾಡಳಿತ ವ್ಯಾಪಕ ಬಂದೂಬಸ್ತ್ ಕೈಗೊಂಡಿದೆ.
ಮತದಾರರನ್ನು ಸೆಳೆಯಲು ಅಕ್ರಮ ಹಣ, ಹೆಂಡ ಸೇರಿದಂತೆ ವಿವಿಧ ರೀತಿಯ ಆಮಿಷಗಳನ್ನು ತಡೆಗಟ್ಟಲು ಜಿಲ್ಲೆಯಲ್ಲಿ 12 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.
ನಿನ್ನೆಯಷ್ಟೇ ರೋಣ ತಾಲೂಕಿನ ಹಿರೇಹಾಳ ಚೆಕ್ ಪೋಸ್ಟ್ ನಲ್ಲಿ ಲಕ್ಷಾಂತರ ರೂಪಾಯಿ ನಗದು ವಶಪಡಿಸಿಕೊಂಡ ಬೆನ್ನಲ್ಲೇ ಮಧ್ಯರಾತ್ರಿ ಗಜೇಂದ್ರಗಡ ಸಮೀಪದ ಚಿಲಝರಿ ಕ್ರಾಸ್‌ನಲ್ಲಿ ಇರುವ ಚೆಕ್‌ಪೋಸ್ಟ್‌ನಲ್ಲಿ 1ಲಕ್ಷ 32 ಸಾವಿರ ಹಣ ಸಿಕ್ಕಿದೆ.
ಹುಬ್ಬಳ್ಳಿಯಿಂದ ಗಜೇಂದ್ರಗಡ ಪಟ್ಟಣಕ್ಕೆ ಬರುತ್ತಿದ್ದ ಟಾಟಾಏಸ್ ವಾಹನದಲ್ಲಿ ಈ ಹಣ ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿ ಮೂಲದ ಮಹಮ್ಮದ್ ಗೌಸ್ ಈ ಹಣ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಅಕ್ರಮವಾಗಿ ಎರಡು ಕೆ.ಜಿ ತೂಕದ ಬೆಳ್ಳಿ ವಸ್ತುಗಳನ್ನು ಕೂಡ ಜಪ್ತಿ ಮಾಡಲಾಗಿದೆ.
ಗದಗ ನಗರದಿಂದ ಗಜೇಂದ್ರಗಡ ಪಟ್ಟಣಕ್ಕೆ ಈ ಬೆಳ್ಳಿ ವಸ್ತುಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಯಾವುದೇ ದಾಖಲೆ ಇಲ್ಲದೆ ಗದಗ ಮೂಲದ ಗುರುವಂಧನ್ ಎಂಬುವವರು ಈ ಬೆಳ್ಳಿ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದರು ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಹಣ ಹಾಗೂ ಬೆಳ್ಳಿ ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಎರಡು ಪ್ರಕರಣಗಳು ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿವೆ.