ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಏ. 10ರಿಂದ

0
state level
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜಗದ್ಗುರು ಸಿದ್ಧಾರೂಢ ಸ್ವಾಮೀಜಿ ಅವರ ಜಯಂತ್ಯುತ್ಸವದ ಅಂಗವಾಗಿ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ಏ. 10ರಿಂದ 15ರವರೆಗೆ ರಾಜ್ಯ ಮಟ್ಟದ 9ನೇ ವರ್ಷದ ಭಜನಾ ಸ್ಪರ್ಧೆ ಏರ್ಪಡಿಸಿದೆ ಎಂದು ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಸಮಿತಿ ಅಧ್ಯಕ್ಷ ಹಾಗೂ ಶ್ರೀಮಠದ ಧರ್ಮದರ್ಶಿ ಶಾಮಾನಂದ ಪೂಜೇರಿ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಭಾಗವಹಿಸುವ ಭಜನಾ ತಂಡದವರು ಏ. 10ರೊಳಗಾಗಿ ಶ್ರೀಮಠದ ಟ್ರಸ್ಟ್ ಕಮಿಟಿಯ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಕೊಳ್ಳಬೇಕು. ಭಾಗವಹಿಸುವ ಭಜನಾ ಮೇಳದವರಿಗೆ ಶ್ರೀಮಠದಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಒಂದು ಬದಿಯ ಬಸ್ ಚಾರ್ಜನ್ನು ಪ್ರತಿ ತಂಡದ 6 ಜನರಿಗೆ ನೀಡಲಾಗುವದು. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಂದು ಭಜನಾ ತಂಡಕ್ಕೆ ಸವಿನೆನಪಿನ ಕಾಣಿಕೆ ಹಾಗೂ ಪ್ರತಿಯೊಂದು ತಂಡದ ಪ್ರತಿಯೊಬ್ಬ ಕಲಾವಿದರಿಗೂ ಪ್ರಶಸ್ತಿ ಪತ್ರ ನೀಡಲಾಗುವದು ಎಂದು ಹೇಳಿದರು.

ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡದವರಿಗೆ ಮೂರು ಪದಗಳನ್ನು ಹಾಡುವ ಅವಕಾಶವಿದ್ದು, ಮೂರೂ ಪದಗಳನ್ನು 18 ನಿಮಿಷಗಳಲ್ಲಿ ಹಾಡಬೇಕು. ಪ್ರತಿ ತಂಡದವರು ಎರಡು ಪದ್ಯಗಳನ್ನು ಕೈವಲ್ಯ ಸಾಹಿತ್ಯದ ಮೇಲೆ ಕಡ್ಡಾಯವಾಗಿ ಹಾಡಬೇಕು (ಕೈವಲ್ಯ ಸಾಹಿತ್ಯ ಎಂದರೆ ಶ್ರೀಮನ್ ನಿಜಗುಣ ಶಿವಯೋಗಿಗಳವರ, ಶ್ರೀ ಸರ್ಪಭೂಷಣ ಶಿವಯೋಗಿಳವರ, ಶ್ರೀ ಮಹಾಲಿಂಗರಂಗರ ಸಾಹಿತ್ಯಗಳು), ಪ್ರತಿ ತಂಡದವರು ಮೂರನೇ ಪದ್ಯವನ್ನು ಜಗದ್ಗುರು ಸಿದ್ಧಾರೂಢರ ಮೇಲಿನ ಪದ್ಯ, ದಾಸರ ಪದ್ಯ, ಶಿಶುನಾಳ ಶರೀಫರ ಪದ್ಯ ಹಾಗೂ ವಚನ ಸಾಹಿತ್ಯ ಇವುಗಳಲ್ಲಿ ಯಾವುದಾದರೊಂದು ಹಾಡಬಹುದು. ಇಲ್ಲವೇ, ಮೂರು ಪದ್ಯಗಳನ್ನು ಕೈವಲ್ಯ ಸಾಹಿತ್ಯದ ಮೇಲೆ ಹಾಡಬಹುದು. ಸಿದ್ದಾರೂಢರ ಮೇಲಿನ ಪದ್ಯ, ದಾಸರ ಪದ್ಯ, ಶರೀಫರ ಪದ್ಯ ಹಾಡುವವರು ತಮ್ಮ ಹಾಡಿನ ಸಾಹಿತ್ಯದ ಒಂದು ಪ್ರತಿಯನ್ನು ನಿರ್ಣಾಯಕರ ಕಡೆ ಒಪ್ಪಿಸಿ ಹಾಡಬೇಕು.

ತಾವು ಹಾಡುವ ಪದ್ಯದ ಹೆಸರು, ರಚಿಸಿದ ಕವಿಗಳ ಹೆಸರು, ರಾಗ, ತಾಳಗಳ ವಿವರವನ್ನು ಒಂದು ಹಾಳೆಯ ಮೇಲೆ ಬರೆದು ನಿರ್ಣಾಯಕರಲ್ಲಿ ಕೊಟ್ಟು ಹಾಡಬೇಕು.

ಜಾನಪದ ಹಾಗೂ ಸಿನೆಮಾ ಶೈಲಿಯಲ್ಲಿ ಹಾಡುವವರಿಗೆ ಅವಕಾಶ ನೀಡಲಾಗುವದಿಲ್ಲ. ಒಂದು ಸ್ಪರ್ಧೆಯಲ್ಲಿ ಭಾಗವಹಿಸುವ ತಂಡದ ಕಲಾವಿದರ ಸಂಖ್ಯೆ 6ಕ್ಕಿಂತ ಕಡಿಮೆ ಇರಬಾರದು ಮತ್ತು 10ಕ್ಕಿಂತ ಹೆಚ್ಚಿಗೆ ಇರಬಾರದು.

ಒಂದು ತಂಡದಲ್ಲಿ ಭಾಗವಹಿಸಿದ ಕಲಾವಿದರಿಗೆ ಮತ್ತೊಂದು ತಂಡದಲ್ಲಿ ಹಾಡಲು ಅವಕಾಶ ಇರುವದಿಲ್ಲ.

ಆದರೆ, ತಬಲಾ ವಾದಕರಿಗೆ ಮಾತ್ರ ಕೇವಲ 2 ತಂಡಗಳಲ್ಲಿ ತಬಲಾ ಸಾಥ್ ನೀಡಲು ಅವಕಾಶ ನೀಡಲಾಗುವುದು. ಇನ್ನುಳಿದ ನಿಯಮಗಳನ್ನು ಸ್ಪರ್ಧೆಯ ಮುಂಚಿತವಾಗಿ ಸ್ಥಳದಲ್ಲಿಯೇ ಎಲ್ಲ ತಂಡದವರಿಗೆ ತಿಳಿಸಲಾಗುವುದು. ಸ್ಪರ್ಧೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳು ಬಂದಲ್ಲಿ ನಿರ್ಣಾಯಕರ ಹಾಗೂ ಶ್ರೀ ಸಿದ್ದಾರೂಢ ಸ್ವಾಮಿಯವರ ಟ್ರಸ್ಟ್ ಕಮಿಟಿಯ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಸಮಿತಿಯ ನಿರ್ಣಯವೇ ಅಂತಿಮ. ಇದರಲ್ಲಿ ಬೇರೆಯವರಿಗೆ ಅವಕಾಶ ಇರುವದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ, ಪುನೀತ ಮಹಾರಾಜರು, ಆತ್ಮಾನಂದ ಸ್ವಾಮೀಜಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿ.ಆರ್. ಓದುಗೌಡರ ಸೇರಿ ಅನೇಕರು ಇದ್ದರು.

ಭಜನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 1 ಲಕ್ಷ ರೂ, ದ್ವಿತೀಯ 80 ಸಾವಿರ ರೂ., ತೃತೀಯ 30 ಸಾವಿರ ರೂ., ಹಾಗೂ ಸಮಾಧಾನಕರ ಬಹುಮಾನವಾಗಿ 10 ತಂಡಗಳಿಗೆ ತಲಾ 9 ಸಾವಿರ ರೂ. ನೀಡಲಾಗುವುದು. 16 ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ತಲಾ ಒಂದು ತಂಡಕ್ಕೆ 10 ಸಾವಿರ ರೂ. ನೀಡಲಾಗುವುದು.

ವೈಯಕ್ತಿಕ ಬಹುಮಾನ (ತಲಾ ಇಬ್ಬರಿಗೆ): ಉತ್ತಮ ಹಾಡುಗಾರರಿಗೆ, ಉತ್ತಮ ಹಾರ್ಮೋನಿಯಂ ವಾದಕರಿಗೆ, ಉತ್ತಮ ತಬಲಾ ವಾದಕರಿಗೆ, ಉತ್ತಮ ತಾಳ ವಾದಕರಿಗೆ, ಉತ್ತಮ ಧಮಡಿ ವಾದಕರಿಗೆ ತಲಾ 3 ಸಾವಿರ ರೂ. ಬಹುಮಾನ ನೀಡಲಾಗುತ್ತಿದೆ. ಮಾಹಿತಿಗಾಗಿ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಯವರ ಮಠ ಟ್ರಸ್ಟ್ ಮೊಬೈಲ್ ಸಂಖ್ಯೆ-9880169881, 8095882033 ಸಂಪರ್ಕಿಸಬಹುದು ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here