HomeGadag Newsಚುನಾವಣೆ ಅಕ್ರಮ ತಡೆಗೆ ಸಿ-ವಿಜಿಲ್ ಆ್ಯಪ್

ಚುನಾವಣೆ ಅಕ್ರಮ ತಡೆಗೆ ಸಿ-ವಿಜಿಲ್ ಆ್ಯಪ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮುಕ್ತ, ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶ ಹೊಂದಿರುವ ಚುನಾವಣಾ ಆಯೋಗವು ಚುನಾವಣಾ ಸಮಯದಲ್ಲಿ ನಡೆಯುವ ಅಕ್ರಮಗಳ ಪತ್ತೆಗೆ ಹಾಗೂ ತಡೆಗೆ ಸಿ-ವಿಜಲ್ ಆ್ಯಪ್ ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ತಿಳಿಸಿದ್ದಾರೆ.

vaishali m l

ಚುನಾವಣೆಯ ಸಂದರ್ಭಗಳಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ವ್ಯಕ್ತಿಗೆ ಅಥವಾ ಪಕ್ಷಕ್ಕೆ ಮತ ಹಾಕುವಂತೆ ಆಮಿಷಗಳನ್ನು ಒಡ್ಡಿದರೆ, ಹಣ, ಉಡುಗೊರೆ, ಕೂಪನ್‌ಗಳ ವಿತರಣೆ, ಮದ್ಯದ ಆಸೆ-ಆಮಿಷ ಒಡ್ಡಿದರೆ ಮತದಾರರು ಸಿ-ವಿಜಿಲ್ ಆ್ಯಪ್ ಮೂಲಕ ದೂರು ನೀಡಬಹುದು. ಮತದಾರರಿಗೆ ಅನುಮತಿ ಇಲ್ಲದಿದ್ದರೂ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಅಂಟಿಸುವುದು, ಬಂದೂಕು ತೋರಿಸಿ ಬೆದರಿಕೆ ಹಾಕುವುದು, ಆಸ್ತಿ ವಿರೂಪಗೊಳಿಸುವುದು, ಧಾರ್ಮಿಕ ಅಥವಾ ಕೋಮು ಪ್ರಚೋದಿತ ಭಾಷಣ ಮಾಡಿದರೂ ಆ್ಯಪ್ ಮೂಲಕ ದೂರು ನೀಡಬಹುದು.

ಮತಗಟ್ಟೆಯ 200 ಮೀಟರ್ ಪ್ರದೇಶದಲ್ಲಿ ನಿಷೇಧವಿದ್ದರೂ ಪ್ರಚಾರ ಮಾಡುವುದು, ಮತದಾನದ ದಿನ ವಾಹನಗಳಲ್ಲಿ ಮತದಾರರನ್ನು ಕರೆತಂದು ಪ್ರಲೋಭನೆಗೊಳಿಸುವುದು, ಮತ ಹಾಕುವಂತೆ ಬೆದರಿಸುವುದು ಹಾಗೂ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದರೆ ಸಿ-ವಿಜಿಲ್ ಆ್ಯಪ್ ಮೂಲಕ ದೂರು ಸಲ್ಲಿಸಲು ಅವಕಾಶವಿದೆ. ಸಿ-ವಿಜಿಲ್ ಮೂಲಕ ಸಲ್ಲಿಕೆಯಾಗುವ ದೂರುಗಳಿಂದ ಘಟನೆ ನಡೆದ ಸ್ಥಳದ ಮಾಹಿತಿ ಲಭ್ಯವಾಗುವುದರಿಂದ ಪ್ರಕರಣ ನಡೆದ ಸ್ಥಳಕ್ಕೆ ಅಧಿಕಾರಿಗಳು ತಲುಪಬಹುದು.

ಸಾರ್ವಜನಿಕರು ಪ್ಲೇ ಸ್ಟೋರ್‌ನಲ್ಲಿ ಸಿ-ವಿಜಿಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು.

ಅಕ್ರಮಗಳ ಕುರಿತು ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ಅಪ್‌ಲೋಡ್ ಮಾಡಬಹುದು. ದೂರು ನೀಡುವ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.

ಸಿ-ವಿಜಿಲ್‌ನಲ್ಲಿ ದಾಖಲಾಗುವ ದೂರುಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತ್ಯೇಕ ಸಿಬ್ಬಂದಿಗಳಿದ್ದು, ಮತದಾನ ಮುಕ್ತಾಯವಾಗುವರೆಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ದೂರು ದಾಖಲಾದ ಕೂಡಲೇ ಪರಿಶೀಲಿಸಿ, ದೂರು ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫ್ಲೈಯಿಂಗ್ ಸ್ಕ್ವಾಡ್ ತಂಡಕ್ಕೆ ಪ್ರಕರಣದ ಸಂಪೂರ್ಣ ವಿವರ ರವಾನಿಸಿ ದೂರಿನ ಕುರಿತು ತುರ್ತು ಕ್ರಮ ವಹಿಸುವಂತೆ ನೋಡಿಕೊಳ್ಳಲಾಗುತ್ತದೆ. ಗರಿಷ್ಠ 100 ನಿಮಿಷಗಳ ಒಳಗೆ ದೂರುಗಳನ್ನು ಇತ್ಯರ್ಥಪಡಿಸಲಾಗುತ್ತದೆ.

ಸಾರ್ವಜನಿಕರು ಸಿ-ವಿಜಿಲ್ ಆ್ಯಪ್ ಮಾತ್ರವಲ್ಲದೆ ಉಚಿತ ಸಹಾಯವಾಣಿ ಸಂಖ್ಯೆ-1950ಗೆ ಕರೆಮಾಡಿ ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಬಹುದು. ಈ ಮೂಲಕ ಮುಕ್ತ, ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯಲು ಚುನಾವಣಾ ಆಯೋಗದೊಂದಿಗೆ ಕೈ ಜೋಡಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಆ್ಯಪ್‌ನಿಂದ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಬಹುದು, ಮತದಾರ ಪಟ್ಟಿಯಲ್ಲಿ ಹೆಸರಿಲ್ಲದಿದ್ದಲ್ಲಿ ನಮೂನೆ-6ನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದು ಹಾಗೂ ಹೆಸರು, ವಿಳಾಸ, ಭಾವಚಿತ್ರ, ಲಿಂಗ ಏನಾದರೂ ತಿದ್ದುಪಡಿ ಮಾಡಬೇಕಾದಲ್ಲಿ ನಮೂನೆ-8ನ್ನು ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬಹುದು. ನಿಮ್ಮ ಡಿಜಿಟಲ್ (ಭಾವಚಿತ್ರವುಳ್ಳ) ವೋಟರ್ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಚುನಾವಣೆ ಸಂಬಂಧಿತ ಅಪ್‌ಡೇಟೆಡ್ ಮಾಹಿತಿ ಪಡೆಯಬಹುದಾಗಿದೆ.

ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಜಿಲ್ಲೆಯಲ್ಲಿ ಅಹವಾಲು ಅಥವಾ ದೂರುಗಳನ್ನು ಸಲ್ಲಿಸಲು ಕಂಟ್ರೋಲ್ ರೂಮ್‌ಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಕೆಳಕಂಡ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ (ಡಿಇಓ ಆಫೀಸ್): 08372-239177, 08372-1950; ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್-08372-238300, 9480804400 ; ಜಿಲ್ಲಾ ಅಬಕಾರಿ ಇಲಾಖೆಯ ಕಂಟ್ರೋಲ್ ರೂಮ್-08372-221129, 18004252329; ಜಿಲ್ಲಾ ವಾಣಿಜ್ಯ ತೆರಿಗೆ ಕಂಟ್ರೋಲ್ ರೂಮ್-9008937878, 08372-238307 ಈ ದೂರವಾಣಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ವೈಶಾಲಿ ಎಂ.ಎಲ್ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!