ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ತಾಲೂಕಿನ ನಾಗೇಂದ್ರಗಡ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದಾಗಿ ಬಡ ಕುಟುಂಬಗಳ ನೆಮ್ಮದಿ ಹಾಳಾಗುತ್ತಿದ್ದು, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅಕ್ರಮ ಸಾರಾಯಿ ಮಾರಾಟಕ್ಕೆ ಬ್ರೇಕ್ ಹಾಕುವಂತೆ ಗ್ರಾಮಸ್ಥರು ತಹಸೀಲ್ದಾರ್ ಕಚೇರಿ ಮೂಲಕ ಅಬಕಾರಿ ಇಲಾಖೆಗೆ ಗುರುವಾರ ಮನವಿ ಸಲ್ಲಿಸಿದರು.
ಸಾಮಾಜಿಕ ಹೋರಾಟಗಾರ ಫಕ್ರುಸಾಬ ಕೊತವಾಲೆ ಮಾತನಾಡಿ, ಬರಗಾಲದಿಂದಾಗಿ ಬೆಳೆಯಿಲ್ಲದೆ, ಹಳ್ಳಿಯಲ್ಲಿ ಕುಡಿಯುವ ನೀರು, ಹೊತ್ತಿನ ಊಟಕ್ಕೂ ತಾತ್ವರ ಎದುರಾಗಿದೆ. ಆದರೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಮಾತ್ರ ಯಾವುದೇ ಕಡಿವಾಣ ಇಲ್ಲವಾಗಿದ್ದು, ಕೆಲವರು ಇದನ್ನೇ ನಿತ್ಯದ ದಂಧೆ ಮಾಡಿಕೊಂಡಿದ್ದಾರೆ. ಹಳ್ಳಿಗಳಲ್ಲಿ ಯುವಕರು ಸಾರಾಯಿ ಸೇವೆನೆಯ ದಾಸರಾಗುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದ ಅವರು, ಕೂಲಿ ಮಾಡಿ ಹೊಟ್ಟೆ ಹೊರೆದುಕೊಳ್ಳುವ ಜನರನ್ನು ಮದ್ಯ ವ್ಯಸನಿಗಳನ್ನಾಗಿ ಮಾಡಿ ತಾವು ಮಾತ್ರ ಜೇಬು ತುಂಬಿಸಿಕೊಳ್ಳುತ್ತಿರುವ ಅಕ್ರಮ ಸಾರಾಯಿ ಅಂಗಡಿಗಳ ಮೇಲೆ ಕೂಡಲೇ ಅಬಕಾರಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು.



