ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ದರೋಡೆ ಪ್ರಕರಣ ಎಂದು ಕರೆಯಲ್ಪಟ್ಟಿದ್ದ ಬೇವೂರು ಬ್ಯಾಂಕ್ ರಾಬರಿ ಪ್ರಕರಣವನ್ನು ಕೊಪ್ಪಳ ಪೊಲೀಸರು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ.
ಕೊಪ್ಪಳದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್ಪಿ ಜಿ.ಸಂಗೀತಾ, ಬೇವೂರು ಬ್ಯಾಂಕ್ ದರೋಡೆಗೆ ಸಂಬಂಧಿಸಿದಂತೆ ಇಬ್ಬರು ಅಂತಾರಾಜ್ಯ ಖದೀಮರನ್ನು ಪತ್ತೆ ಹಚ್ಚಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರನ್ನು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಮಾಡಾ ತಾಲೂಕಿನ ಭಾವಿ ಗ್ರಾಮದ ಪ್ರಶಾಂತ ಅಲಿಯಾಸ್ ಗೋಟುದಾದಾ ಮೋರೆ (30) ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಾಸಿರಸ ತಾಲೂಕಿನ ಆಕಲೋಜ ಗ್ರಾಮದ ಹರಿದಾಸ ಅಲಿಯಾಸ್ ಹರ್ಷರಾಜ ಟೋಂಬ್ರೆ (35) ಎಂದು ಗುರುತಿಸಲಾಗಿದೆ.
ಬಂಧಿತರಿಂದ 13.81 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ದರೋಡೆ ಕೃತ್ಯಕ್ಕೆ ಬಳಸಿದ ಸ್ಕಾರ್ಪಿಯೋ, ಮಾರುತಿ ಸ್ವಿಫ್ಟ್ ಕಾರು ಮತ್ತು ಮೂರು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದರು.
ಸೆಪ್ಟೆಂಬರ್ 23ರಂದು ಖದೀಮರ ತಂಡ ಬೇವೂರು ಬ್ಯಾಂಕ್‌ಗೆ ಕನ್ನ ಹಾಕಿದ್ದರು. ದರೋಡೆಗೂ ಮುನ್ನ ಬ್ಯಾಂಕ್‌ನ ಸಿಸಿ ಕ್ಯಾಮೆರಾ ಫೂಟೇಜ್ ಸಿಗದಂತೆ ಕನೆಕ್ಷನ್ ಕೇಬಲ್ ಕತ್ತರಿಸಿದ್ದರು. ಗ್ಯಾಸ್ ಕಟರ್ ಮಷಿನ್‌ನಿಂದ ಲಾಕರ್ ಕೊರೆದು, ಅಲ್ಲಿದ್ದ ಸುಮಾರು 1.46 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ದೋಚಿದ್ದರು. ಈ ಕೃತ್ಯದಲ್ಲಿ ಮಹಾರಾಷ್ಟ್ರದ ನಾಲ್ವರಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದ ಸಂತೋಷ್ ಎಂಬಾತ ಈ ಗ್ಯಾಂಗ್‌ನ ಪ್ರಮುಖ ರೂವಾರಿ.
ಸಂತೋಷ್ ಹಾಗೂ ಮತ್ತೊಬ್ಬನ ಪತ್ತೆಗೆ ಜಾಲ ಬೀಸಲಾಗಿದೆ. ಜೊತೆಗೆ ಉತ್ತರ ಪ್ರದೇಶದ 6 ಜನರು ಸಹ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಶೀಘ್ರದಲ್ಲೇ ಬಲೆಗೆ ಬೀಳಲಿದ್ದಾರೆ ಎಂದು ಎಸ್ಪಿ ಜಿ.ಸಂಗೀತಾ ತಿಳಿಸಿದರು.
ಪೊಲೀಸ್ ತಂಡಕ್ಕೆ ಬಹುಮಾನ ಘೋಷಣೆ
ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳು ಹಾಗೂ ವಸ್ತುಗಳ ಪತ್ತೆಗೆ ಎಸ್ಪಿ ಜಿ.ಸಂಗೀತಾ, ಗಂಗಾವತಿ ಡಿವೈಎಸ್‌ಪಿ ಆರ್.ಎಸ್.ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಯಲಬುರ್ಗಾ ಸಿಪಿಐ ಎಂ.ನಾಗಿರೆಡ್ಡಿ ನೇತೃತ್ವದಲ್ಲಿ ಕೊಪ್ಪಳ ಡಿಎಸ್ಆರ್ಬಿ ಘಟಕದ ಪಿಐ ಶಿವರಾಜ ಇಂಗಳೆ, ಕುಕನೂರು ಪಿಎಸ್ಐ ವೆಂಕಟೇಶ ಎನ್., ಕೊಪ್ಪಳ ಡಿಎಸ್ಆರ್ಬಿ ಘಟಕದ ಪಿಎಸ್ಐ ಅಮರೇಶ ಹುಬ್ಬಳ್ಳಿ ಹಾಗೂ ಪೊಲೀಸ್ ಸಿಬ್ಬಂದಿ ವೆಂಕಟೇಶ, ಸಣ್ಣವೀರಣ್ಣ, ಅಶೋಕ, ತಾರಾಸಿಂಗ್, ಕೊಟೇಶ್, ದೇವೇಂದ್ರಪ್ಪ, ರವಿ ರಾಠೋಡ್, ವಿಶ್ವನಾಥ, ಶರಣಪ್ಪ, ಮಹಾಂತಗೌಡ, ರವಿಶಂಕರ ಹಾಗೂ ತಾಂತ್ರಿಕ ವಿಭಾಗದ ಪ್ರಸಾದ ಅವರು ಶ್ರಮಿಸಿದ್ದರು. ಈ ತಂಡಕ್ಕೆ ಎಸ್ಪಿ.ಜಿ.ಸಂಗೀತಾ ಬಹುಮಾನ ಘೋಷಣೆ ಮಾಡಿದರು.
ಸೈಲೆಂಟ್ ಲೇಡಿ ಸಿಂಗಂ!!
ಕೊಪ್ಪಳ ಎಸ್ಪಿ ಜಿ.ಸಂಗೀತಾ, ಜಿಲ್ಲೆಗೆ ಬಂದಾಗಿನಿಂದ ಮಾತು ತುಂಬಾನೇ ಕಮ್ಮಿ. ಆದರೆ ಕೆಲಸದ ವಿಷಯದಲ್ಲಿ ಫಿಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡು ಸೈಲೆಂಟ್ ಲೇಡಿ ಸಿಂಗಂ ಎನಿಸಿಕೊಂಡಿದ್ದಾರೆ. ಮಾಧ್ಯಮ ಮಿತ್ರರೊಂದಿಗೂ ಅವರು ಮಿತಭಾಷಿ. ಬ್ಯಾಂಕ್ ದರೋಡೆ ಪ್ರಕರಣವನ್ನು ಘಟನೆ ನಡೆದು ಕೇವಲ 13 ದಿನಗಳಲ್ಲಿ ಪತ್ತೆ ಹಚ್ಚಿರುವ ಸಾಧನೆ ಶ್ಲಾಘಿಸಿ, ಅವರ ಕಾರ್ಯವೈಖರಿಯನ್ನು ಕಂಡ ಸಾರ್ವಜನಿಕರು ಅಭಿಮಾನಪೂರ್ವಕವಾಗಿ ಎಸ್ಪಿ ಸಂಗೀತಾ ಅವರಿಗೆ ಸೈಲೆಂಟ್ ಲೇಡಿ ಸಿಂಗಂ ಎಂಬ ಟೈಟಲ್‌ನಿಂದ ಕರೆಯುತ್ತಿದ್ದಾರೆ.