ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಮಾಜದ ಕಣ್ಣಾಗಿರುವ ಮಹಿಳೆ ಶಿಕ್ಷಣವಂತಳಾದಾಗ ಮಾತ್ರ ಸುಶಿಕ್ಷಿತ, ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ಮಹಿಳೆಯರು ತಮ್ಮ ಹಕ್ಕು, ಸ್ವಾತಂತ್ರ್ಯ, ಸಮಾನತೆ ಪಡೆಯಲು ಶಿಕ್ಷಣವಂತರಾಗಬೇಕು ಎಂದು ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಂಸ್ಥೆಯ ಉಪಾಧ್ಯಕ್ಷೆ ಜಯಲಕ್ಷ್ಮಿ ಮಹಾಂತಶೆಟ್ಟರ ಹೇಳಿದರು.
ಅವರು ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಭವನದಲ್ಲಿ ಬಳಗದ ವಿವಿಧ ಅಂಗ ಸಂಸ್ಥೆಗಳ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲಿ ಸ್ತ್ರೀ ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ಭಾವನೆ ಭಾರತೀಯ ಸಂಸ್ಕೃತಿಯಲ್ಲಿ ಮನೆ ಮಾಡಿದೆ. ಮಾನವೀಯತೆಯ ಸಾಕಾರ ಮೂರ್ತಿಯಾದ ಮಹಿಳೆ ಶಿಕ್ಷಣ, ಸಂಸ್ಕೃತಿ, ಸಂಸ್ಕಾರ, ಧರ್ಮದ ಪ್ರತಿರೂಪವೇ ಆಗಿದ್ದಾಳೆ. ಪ್ರಸ್ತುತ ದಿನಮಾನಗಳಲ್ಲಿ ಸ್ತ್ರೀ ಸಮಾನತೆ, ಸರಕಾರದ ಸವಲತ್ತು, ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆದುಕೊಂಡು ಸಮಾಜಮುಖಿ ಕಾರ್ಯಗಳೊಂದಿಗೆ ಮುನ್ನಡೆಯಬೇಕು. ಹೆಣ್ಣು ಮಕ್ಕಳು ಹೆಚ್ಚು ಸಾಕ್ಷರರಾಗುವ ಮೂಲಕ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವಾವಲಂಬಿಯಾಗಿ ಬಾಳುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಕಿ ಮೈತ್ರಾದೇವಿ ಹಿರೇಮಠ, ಸಂಸ್ಥೆಯ ಕಾರ್ಯದರ್ಶಿ ಜಯಲಕ್ಷ್ಮಿ ಗಡ್ಡದೇವರಮಠ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷೆ ಸುವರ್ಣಾಬಾಯಿ ಬಹದ್ದೂರ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಕಾಲೇಜಿನ ಪ್ರಾಚಾರ್ಯ ವಿಜಯಕುಮಾರ ಬಿಳೆಯಲಿ ಪ್ರಾಸ್ತಾವಿಕ ನುಡಿದರು. ಶಾರದಕ್ಕ ಮಹಾಂತಶೆಟ್ಟರ, ಸಾವಿತ್ರಮ್ಮ ಹೂವಿನ, ಜೆ.ಡಿ. ಲಮಾಣಿ, ಪಿ.ಬಿ. ಜಕ್ಕನಗೌಡ್ರ, ಸ್ವಾತಿ ಪೈ, ಹನುಮಂತಪ್ಪ ಭಜಂತ್ರಿ, ಕಾವ್ಯ ದೇಸಾಯಿ ಸೇರಿ ಶಿಕ್ಷಕರು, ಸಿಬ್ಬಂದಿಗಳು ಇದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ ಪ್ರಭುಗೌಡ ಯಕ್ಕಿಕೊಪ್ಪ, ರೂಪ ನವಲೆ ನಿರ್ವಹಿಸಿದರು.