ಹೋಳಿ ಹಬ್ಬ ಹೊಸತನದ ಸಂಕೇತ

0
holi
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಹೋಳಿ ಹಬ್ಬ ಬಣ್ಣದ ಸಂಕೇತ ಮಾತ್ರವಲ್ಲ, ಅದು ಬದುಕಿಗೆ ಬಣ್ಣ ತುಂಬಿ ಸಂತೋಷ ಮೂಡಿಸುವ ಹಬ್ಬವಾಗಿದೆ. ಪ್ರತಿಯೊಬ್ಬರಲ್ಲಿ ಇರುವ ಕೆಟ್ಟದನ್ನು ಕಳೆದು, ಒಳ್ಳೆಯದನ್ನು ಪಡೆದುಕೊಳ್ಳುವ ಸಂದರ್ಭವಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

Advertisement

ಅವರು ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಧಾರವಾಡ ಜಿಲ್ಲಾ ಘಟಕ ಆಯೋಜಿಸಿದ್ದ ಹೋಳಿ ಹಬ್ಬದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಭಾರತೀಯರ ಪ್ರತಿ ಹಬ್ಬಗಳಿಗೂ ಒಂದು ಐತಿಹಾಸಿಕ ಕಾರಣ, ಹಿನ್ನೋಟ, ಮುನ್ನೋಟಗಳಿವೆ. ಕಾಮದಹನ ಕೆಟ್ಟದನ್ನು ಸುಡುವ ಪ್ರತೀಕ. ಬಣ್ಣ ಹಚ್ಚಿಕೊಳ್ಳುವುದು ಉತ್ತಮ ಗುಣಗಳೊಂದಿಗೆ ಹೊಸ ಭವಿಷ್ಯ ಕಟ್ಟಿಕೊಳ್ಳುವ ಪ್ರತೀಕವಾಗಿದೆ. ಹೋಳಿ ಹಬ್ಬವನ್ನು ದೇಶದ ನಾನಾ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಆದರೆ ಉತ್ತರ ಕರ್ನಾಟಕದ ಹೋಳಿ ಆಚರಣೆ ವಿಶೇಷ ಮತ್ತು ವಿಶಿಷ್ಟವಾಗಿದೆ ಎಂದು ಅವರು ಹೇಳಿದರು.

ಹಬ್ಬಗಳನ್ನು ಉತ್ತರ ಕರ್ನಾಟಕ ಭಾಗದಲ್ಲಿ ವೈಭವ ಮತ್ತು ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಆಚರಣೆಗಳಿಗೆ ಸಂಸ್ಕೃತಿ, ಸಂಸ್ಕಾರಗಳ ಹಿನ್ನೆಲೆ ಇರುತ್ತದೆ. ಇಂದು ಜರುಗಿದ ಹೋಳಿ ಹಾಡು, ಹಾಸ್ಯ ಕಾರ್ಯಕ್ರಮಗಳು ನೀತಿ ಪಾಠವಾಗಿದ್ದವು ಎಂದರು.

ರಾಜ್ಯ ಸರಕಾರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಿದೆ ಮತ್ತು ಲೋಕಸಭೆ ಸಾರ್ವತ್ರಿಕ ಚುನಾವಣೆ ಪ್ರಕಟವಾಗಿದೆ. ಇಂತ ಕಾರ್ಯಗಳ ಒತ್ತಡದ ಮಧ್ಯದಲ್ಲಿಯೂ ಜಿಲ್ಲೆಯ ನೌಕರರು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.

ಧಾರವಾಡ ಜಿಲ್ಲಾಡಳಿತದ ವಿವಿಧ ಅಧಿಕಾರಿಗಳು ಪರಸ್ಪರ ಬಣ್ಣಗಳನ್ನು ಎರಚಿ ಹೋಳಿ ಆಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮಂಜುನಾಥ ಯಡಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಖಜಾಂಚಿ ರಾಜಶೇಖರ ಬಾಣದ ವಂದಿಸಿದರು.

ಧಾರವಾಡ ನಗರದ ಕರ್ನಾಟಕ ರಾಜ್ಯ ನೌಕರರ ಸಂಘದ ಆವರಣದಲ್ಲಿ ಜುರುಗಿದ ಹೋಳಿ ಹಬ್ಬದಲ್ಲಿ ಜಿಲ್ಲಾದಿಕಾರಿ ದಿವ್ಯ ಪ್ರಭು ಅವರೊಂದಿಗೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಆರ್.ಸಿ.ಎಚ್.ಓ ಅಧಿಕಾರಿ ಡಾ. ಸುಜಾತಾ ಹಸವಿಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ, ಜಿಲ್ಲಾ ನಿರೂಪಣಾಧಿಕಾರಿ ಅಂಗಡಿ, ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ದೇವಿದಾಸ ಶಾಂತಿಕರ, ಗೌರವಾಧ್ಯಕ್ಷ ರಮೇಶ ಲಿಂಗದಾಳ, ಹಿರಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ, ಸಂಘಟನಾ ಕಾರ್ಯದರ್ಶಿ ಸುಜಾತಾ ಬಡ್ಡಿ, ಪದಾಧಿಕಾರಿಗಳಾದ ಚಂದ್ರಿಕಾ ಡಮ್ಮಳ್ಳಿ, ಪುಷ್ಪಾವತಿ ಮೇದಾರ ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನೌಕರರು, ನೌಕರರ ಕುಟುಂಬ ಸದಸ್ಯರು ಸೇರಿದಂತೆ ಹಲವರು ಭಾಗವಹಿಸಿ, ಪರಸ್ಪರ ಬಣ್ಣ ಹಚ್ಚಿ, ಹೋಳಿ ಹಬ್ಬ ಆಚರಣೆ ಮಾಡಿದರು.

ಜಾನಪದ ಕಲಾ ತಂಡಗಳಾದ ಸ್ನೆಹ ರಂಗ ಕಲಾ ಬಳಗ ಮತ್ತು ಸಿರಿಗಂಧ ಕಲಾ ತಂಡಗಳು ಜಾನಪದ ಗೀತೆ ಹಾಗೂ ಹೋಳಿ ಹಬ್ಬದ ಹಾಡುಗಳನ್ನು ಹಾಗೂ ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಅವರು ಹಾಸ್ಯಮಯ ಪ್ರಸಂಗಗಳನ್ನು ಪ್ರಸ್ತುತಪಡಿಸಿ ನೆರೆದವರನ್ನು ರಂಜಿಸಿದರು.

 


Spread the love

LEAVE A REPLY

Please enter your comment!
Please enter your name here