ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಬದುಕಿನ ಜಂಜಾಟದಲ್ಲಿ ಸದಾ ಮುಳುಗಿರುವವರಿಗೆ ಸಂಗೀತ ಸಂತೋಷ-ಸಮಾಧಾನ ನೀಡುವ ಸಂಜೀವಿನಿಯಾಗಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ಸಂಗೀತ ಸೌರಭ ಹಾಗೂ ಸಂಗೀತ ದಿಗ್ಗಜರಿಗೆ ಸತ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಗದುಗಿನ ಪಂ.ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಹಾಗೂ ಧಾರವಾಡದ ಪಂ. ಡಾ. ಎಮ್.ವೆಂಕಟೇಶ ಕುಮಾರ್ ಇವರಿಗೆ ವಿಶೇಷ ಸತ್ಕಾರ ಹಾಗೂ ಗೌರವ ಗುರುರಕ್ಷೆ ನೀಡಿದ ತರುವಾಯ ಮಾತನಾಡಿದ ಶ್ರೀಗಳು, ಪ್ರತಿ ವರುಷದ ಜಯಂತಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಉಭಯ ಸಂಗೀತ ದಿಗ್ಗಜರು ಎರಡು ಗಂಟೆಗಳ ವಿಶೇಷ ಸಂಗೀತ ನಡೆಸಿಕೊಡುವುದಾದರೆ ಅದಕ್ಕೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.
ನಂತರ ಪಂ. ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಅವರು ‘ಮಲತ್ರಯಗಳನು ತೊಲಗಿಸುವಂಥ ಜಾಣ್ಮೆಯುಳ್ಳವನೇ ವೀರಶೈವನು’ ಅಲ್ಲಮಪ್ರಭುಗಳ ವಚನವನ್ನು ಜೋಗ ರಾಗ ತೀನತಾಳದಲ್ಲಿ ಹಾಗೂ ತಮ್ಮ ಸ್ವರಚಿತ ಕವನ ‘ಅಂದಿಂದು ಕಂದದಾ ಮುಂದೆಂದೂ ನಂದದಾ ಪಂಚ ಪೀಠಾಧೀಶರ ಬೆಳಕು’ ಗೀತೆಯನ್ನು ಚಾಂದ ರಾಗದಲ್ಲಿ, ದಾದ್ರಾ ತಾಳದಲ್ಲಿ ಪ್ರಸ್ತುತಪಡಿಸಿ ಶ್ರೋತೃಗಳ ಮನಸ್ಸಿಗೆ ಮುದ ನೀಡಿದರು. ಗದಗಿನ ಶರಣಯ್ಯನವರು ತಬಲಾ, ಪಂ.ಬಸವರಾಜ ಹಿರೇಮಠ ಹರ‍್ಮೋನಿಯಂ ಸಾಥ್ ನೀಡಿದರು.
ಎಡೆಯೂರು ರೇಣುಕ ಶಿವಾಚಾರ್ಯರು, ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಾಧೀಶರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿದರು. ಗದಗಿನ ಗಾನಭೂಷಣ ವೀರೇಶ ಕಿತ್ತೂರ ಪ್ರಾರ್ಥನೆ ಹಾಡಿದರು. ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಪಂ. ಡಾ. ಎಮ್.ವೆಂಕಟೇಶ ಕುಮಾರ್ ಅವರು ಬಸಂತ ರಾಗ, ದೃತ ತಾಳದಲ್ಲಿ ಪಶುಪತೇ ಗಿರಿಜಾಪತಿ, ಹಾನಗಲ್ ಕುಮಾರಸ್ವಾಮಿಗಳಿಂದ ವಿರಚಿತ ‘ಸುಶಾಂತ ಗುರುವರೇಣ್ಯ ರೇಣುಕಾರ್ಯಭೋ’ ಗೀತೆಯನ್ನು ಭೀಮಪಲಾಸ್ ರಾಗ, ಜಪ್ ತಾಳದಲ್ಲಿ, ನಂತರ ಗದಗಿನ ಕವಿ ಪುಟ್ಟರಾಜ ಗವಾಯಿಗಳಿಂದ ವಿರಚಿತ `ವೀರಶೈವದ ಜಗದ್ಗುರು ಪಂಚಾಚಾರ್ಯರ ನಮಿಸುವೆನು’ ಹಾಡನ್ನು ರಾಗೇಶ್ರೀ ರಾಗ, ಕೇರವ ತಾಳದಲ್ಲಿ ಅಮೋಘವಾಗಿ ಪ್ರಸ್ತುತಪಡಿಸಿ ಜನಮನ ಸೂರೆಗೊಂಡರು.
Advertisement


