ಸಹನೆ-ಸದ್ಗುಣಗಳಿಂದ ಕಷ್ಟಗಳು ದೂರ : ಶ್ರೀ ರಂಭಾಪುರಿ ಜಗದ್ಗುರುಗಳು

0
rambhapuri
Spread the love

ವಿಜಯಸಾಕ್ಷಿ ಸುದ್ದಿ, ಸೊರಬ : ಮಾನವೀಯ ಆದರ್ಶ ಮೌಲ್ಯಗಳಿಂದ ಬದುಕು ಶ್ರೀಮಂತಗೊಳ್ಳುತ್ತದೆ.
ಸದಾಚಾರ, ಸಂಸ್ಕೃತಿ ಪಾಲನೆಯಿಂದ ಜೀವನದಲ್ಲಿ ಶ್ರೇಯಸ್ಸು ಪ್ರಾಪ್ತವಾಗುತ್ತದೆ. ಒಂದು ಕ್ಷಣದ ಸಹನೆ ಬೆಟ್ಟದಷ್ಟು ಕಷ್ಟಗಳನ್ನು ದೂರ ಮಾಡಬಲ್ಲದು. ಒಂದು ಕ್ಷಣದ ದುಡುಕಿನಿಂದ ಇಡೀ ಜೀವನ ನಾಶವಾಗಬಹುದೆಂಬುದನ್ನು ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ತಾಲೂಕಿನ ದುಗ್ಲಿ ಕ್ಷೇತ್ರದ ಶ್ರೀ ಗುರು ರೇವಣಸಿದ್ಧೇಶ್ವರ ಮಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಜಾತ್ರಾ ಮಹೋತ್ಸವ ಹಾಗೂ ಲಿಂ.ಮುರುಘೇಂದ್ರ ಶ್ರೀಗಳವರ 5ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಕಣ್ಣು ಚೆನ್ನಾಗಿದ್ದರೆ ನಾವು ಜಗತ್ತನ್ನು ನೋಡಬಹುದು. ನಾಲಿಗೆ-ನಡತೆಗಳು ಚೆನ್ನಾಗಿದ್ದರೆ ಜಗತ್ತು ನಮ್ಮನ್ನು ನೋಡುತ್ತದೆ. ಜೀವನದಲ್ಲಿ ಆದರ್ಶ ವ್ಯಕ್ತಿಗಳ ಸ್ನೇಹವನ್ನು ಸಂಪಾದಿಸಿಕೊಂಡು ಬಾಳಬೇಕು.
ಕನ್ನಡಿ ಸುಳ್ಳು ಹೇಳುವುದಿಲ್ಲ. ನೆರಳು ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಸುಳ್ಳು ಹೇಳದ ಸದಾ ಜೊತೆಗಿರುವ ನಂಬಿಗೆಯ ಸ್ನೇಹಿತರನ್ನು ಸಂಪಾದಿಸಿ ಬಾಳಿದರೆ ಬದುಕಿಗೊಂದು ಮೌಲ್ಯ ಬರುತ್ತದೆ.
ಮನುಷ್ಯ ಜೀವನದಲ್ಲಿ ಭೌತಿಕ ಸಂಪತ್ತಿಗಿಂತ ಮಾನಸಿಕ ಶಾಂತಿ ನೆಮ್ಮದಿ ಬಲು ಮುಖ್ಯ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಜೀವನ ದರ್ಶನದ ಸೂತ್ರಗಳನ್ನು ಪರಿಪಾಲಿಸಿ ಬಾಳಿದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಧರ್ಮ ಜಾಗೃತಿ ಸಮಾರಂಭ ಉದ್ಘಾಟಿಸಿದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಸುಳ್ಳಿನ ಜೊತೆ ದುಷ್ಟ ಶಕ್ತಿ ಇದ್ದರೆ ಸತ್ಯದ ಜೊತೆ ದೈವಶಕ್ತಿ ಇರುತ್ತದೆ.
ಜೀವನದಲ್ಲಿ ಬರುವ ಸಮಸ್ಯೆ ಸವಾಲುಗಳನ್ನು ಎದುರಿಸುವಂಥ ಆತ್ಮ ಬಲ ಬೆಳೆದು ಬರಲು ಅಧ್ಯಾತ್ಮ ಚಿಂತನೆಗಳ ಅವಶ್ಯಕತೆಯಿದೆ. ಶ್ರೀ ಗುರು ರೇವಣಸಿದ್ಧೇಶ್ವರ ಮಠದ ಶ್ರೀಗಳವರು ಭಕ್ತ ಸಂಕುಲದ ಶ್ರೇಯಸ್ಸಿಗಾಗಿ ಹಲವಾರು ರಚನಾತ್ಮಕ ಕಾರ್ಯಗಳನ್ನು ಕೈಗೊಂಡಿರುವುದು ಸ್ತುತ್ಯವಾದುದೆಂದರು.
ಸಮಾರಂಭದಲ್ಲಿ ಜಡೆಯ ಮಹಾಂತ ಸ್ವಾಮಿಗಳು, ಶಾಂತಪೂರ ಶಿವಾನಂದ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯರು, ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಯಲಬುರ್ಗಾದ ಶಿವಲಿಂಗ ಸ್ವಾಮಿಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಮಾಜಿ ಶಾಸಕ ವಿ.ಎಸ್. ಪಾಟೀಲ್, ಶಿವಮೊಗ್ಗದ ಕೆ.ಪಿ. ರುದ್ರೇಗೌಡ ಗಿಣಿವಾಲ, ಸೊರಬದ ನಾಗರಾಜಗೌಡ್ರ ಚಿಕ್ಕಾವಲಿ, ಬಸವರಾಜಪ್ಪ ಬಾರಂಗಿ, ಸಿ.ಪಿ. ಈರೇಶಗೌಡ್ರ, ಶಿರಸಿಯ ಬಸವರಾಜ ಚಕ್ರಸಾಲಿ, ಶಿವಲಿಂಗಯ್ಯ ಎಸ್.ಅಲ್ಲಯ್ಯನವರಮಠ, ಶಂಕರ್ ಶೇಟ್, ಆನಂದಪ್ಪ, ಲತಾ ಹೆಚ್.ಡಿ., ಮಲ್ಲಮ್ಮ ಕಬ್ಬೂರು, ಚಂದ್ರಪ್ಪ ಹೊಸೂರು, ರೂಪಾ ಪರಶುರಾಮ ಮುಖ್ಯ ಅತಿಥಿಳಾಗಿ ಪಾಲ್ಗೊಂಡಿದ್ದರು.
ಡಾ.ಗುರುಪಾದಯ್ಯ ಸಾಲಿಮಠ ಮತ್ತು ಶಿಕ್ಷಕಿ ಕರಬಸಮ್ಮ ನಿರೂಪಿಸಿದರು.
ನೇತೃತ್ವ ವಹಿಸಿದ ದುಗ್ಲಿ-ಕಡೇನಂದಿಹಳ್ಳಿ ತಪೋಕ್ಷೇತ್ರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಉತ್ಕೃಷ್ಟ ಸಂಸ್ಕೃತಿಯನ್ನು ಬೆಳೆಸುವುದೇ ಈ ಸಮಾರಂಭದ ಮೂಲ ಆಶಯ. ವೀರಶೈವ ಧರ್ಮ ಸ್ಥಾಪಕರಾದ ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ಪುನರುತ್ಥಾನಗೊಳಿಸಿ ಜನರನ್ನು ಸನ್ಮಾರ್ಗದತ್ತ ಕರೆ ತರುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ ಎಂದರು.

Spread the love
Advertisement

LEAVE A REPLY

Please enter your comment!
Please enter your name here