ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ದೇಶದ ಬಗ್ಗೆ ಪ್ರೀತಿ, ಅಭಿಮಾನ, ವಿಶ್ವಾಸ ಇದ್ದವರು ಬಿಜೆಪಿಯನ್ನು ಬೆಂಬಲಿಸುತ್ತಾರೆ. ರೋಣ, ಗಜೇಂದ್ರಗಡ ತಾಲೂಕುಗಳಲ್ಲಿ ದೇಶಕ್ಕಾಗಿ ತಮ್ಮ ಜೀವನವನ್ನೇ ಬಲಿದಾನ ಮಾಡಿದ ಅನೇಕ ಮಹನೀಯರಿದ್ದಾರೆ. ಹಾಗೆಯೆ ದೇಶ ಪ್ರೇಮವುಳ್ಳ ಜನತೆ ಈಗಲೂ ಇದ್ದು, ಅವರೆಲ್ಲರೂ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಭಾಜಪ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನರೇಗಲ್ಲ ಹೋಬಳಿಯ ನಿಡಗುಂದಿ, ಹಾಲಕೆರೆ, ಮಾರನಬಸರಿ ಮತ್ತು ಅಬ್ಬಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಚುನಾವಣಾ ಪ್ರಚಾರ ಕೈಗೊಂಡ ಅವರು,
ದೇಶಕ್ಕೆ ಒಬ್ಬ ಮಹಾನ್ ನೇತಾರ ನರೇಂದ್ರ ಮೋದಿಯವರ ರೂಪದಲ್ಲಿ ನಮಗೆ ದೊರಕಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ದೇಶದಲ್ಲಿನ ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ಅದೆಷ್ಟೋ ಕಡಿಮೆಯಾಗಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಈ ದೇಶದಲ್ಲಿ ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ಬೆಳೆಸುವದನ್ನು ಬಿಟ್ಟು ಬೇರೆ ಏನನ್ನೂ ಮಾಡಿಲ್ಲ ಎಂದು ಆರೋಪಿಸಿದರು.
ಕಳೆದ ಹತ್ತು ವರ್ಷಗಳಲ್ಲಿ ಈ ದೇಶ ಅತ್ಯಂತ ಸ್ವಚ್ಛ ಆಡಳಿತವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಂಡಿದೆ. ಈ ದೇಶದ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಲ್ಲದೆ, ನೇರವಾಗಿ ರೈತರ ಖಾತೆಗೆ ಹಣ ಜಮೆ ಮಾಡುವ ಮೂಲಕ ಮೋದಿಯವರು ರೈತಪರ ಕೆಲಸವನ್ನು ಮಾಡಿದ್ದಾರೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿದ್ದಾರೆ. ದೇಶದಲ್ಲಿನ ಬಹುತೇಕ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಿರುವ ಮೋದೀಜಿಯವರು ಈ ದೇಶವನ್ನು ಆರ್ಥಿಕ ಮಟ್ಟದಲ್ಲಿ ಮೂರನೆ ಸ್ಥಾನಕ್ಕೆ ತಂದು ನಿಲ್ಲಿಸುವ ಸಂಕಲ್ಪ ಮಾಡಿದ್ದಾರೆ ಎಂದರಲ್ಲದೆ, ಇನ್ನೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ನಿಮ್ಮ ಭಾಗದ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವ ನನಗೆ ಮತ ನೀಡಬೇಕೆಂದು ವಿನಂತಿಸಿದರು.
ಮಾರನಬಸರಿ ಗ್ರಾಮದಲ್ಲಿ ಸುಮಂಗಲೆಯರು ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರಿಗೆ ಆರತಿ ಬೆಳಗುವ ಮೂಲಕ ಗ್ರಾಮಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅಶೋಕ ನವಲಗುಂದ, ರವಿ ದಂಡಿನ, ನ್ಯಾಯವಾದಿ ಬಿ.ಎಂ. ಸಜ್ಜನರ, ರಾಜಶೇಖರಗೌಡ ಪಾಟೀಲ, ಮುತ್ತಣ್ಣ ಕಡಗದ, ಶಿವಾನಂದ ಮಠದ, ಜೆಡಿಎಸ್ನ ಜಿಲ್ಲಾಧ್ಯಕ್ಷ ಎಂ.ವೈ. ಮದೋಳ, ಜಗದೀಶ ಕರಡಿ, ಆರ್.ಕೆ. ಚವ್ಹಾಣ, ಬಸವರಾಜ ಬೆಲ್ಲದ, ಶಶಿಧರ ಸಂಕನಗೌಡ್ರ, ಬಸವರಾಜ ವಂಕಲಕುಂಟಿ, ರವಿ ಬಿದರೂರ, ಇಂದಿರಾ ತೇಲಿ, ಜ್ಯೋತಿ ಪಾಯಪ್ಪಗೌಡ್ರ, ಲಲಿತಾ ಮಾರನಬಸರಿ ಮುಂತಾದವರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಸಚಿವ ಕಳಕಪ್ಪ ಬಂಡಿ, ದೇಶ ಸುಭದ್ರವಾಗಿದ್ದರೆ ಮಾತ್ರ ನಾವೆಲ್ಲರೂ ನೆಮ್ಮದಿಯಿಂದ ಬಾಳಲು ಸಾಧ್ಯ. ಅಂತಹ ಕನಸಿಗೆ ಬಣ್ಣ ತುಂಬಿ ಅದನ್ನು ನನಸು ಮಾಡಿದ ಮಹಾನ್ ನಾಯಕ ಮೋದಿಯವರು ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿನ ಅನೇಕ ಪಿಡುಗುಗಳಿಗೆ ಸಮರ್ಪಕ ಉತ್ತರ ನೀಡಿದ್ದಾರೆ. ಈ ಸಾರೆಯೂ ಅವರನ್ನು ಪ್ರಧಾನಿ ಮಾಡಲು, ನಮ್ಮ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಅತ್ಯಧಿಕ ಮತಗಳಿಂದ ಆರಿಸಿ ತರಬೇಕೆಂದು ವಿನಂತಿಸಿದರು.