ವಿಜಯಸಾಕ್ಷಿ ಸುದ್ದಿ ಗಜೇಂದ್ರಗಡ
ತೆಲಂಗಾಣ ರಾಜ್ಯದಲ್ಲಿ ಬಂಜಾರ ಮಹಿಳೆಯ ಮೇಲೆ ನಡೆದ ಅತ್ಯಾಚಾರ, ಉತ್ತರಪ್ರದೇಶದ ಹಥ್ರಾಸ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ಹಾಗೂ ಜಸ್ಟೀಸ್ ವರ್ಮಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲು ಆಗ್ರಹಿಸಿ ಇಲ್ಲಿನ ತಹಸೀಲ್ದಾರ್ ಮೂಲಕ ಗುರುವಾರ ಸ್ಥಳೀಯ ಸೇವಾಲಾಲ ಬಂಜಾರ ವೇದಿಕೆಯಿಂದ ಪ್ರಧಾನ ಮಂತ್ರಿಗಳಿಗೆ ಮನವಿ ನೀಡಲಾಯಿತು.
ತೆಲಂಗಾಣ ಹಾಗೂ ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಅತ್ಯಂತ ಹೇಯ ಹಾಗೂ ಮಾನವಕುಲ ತಲೆ ತಗ್ಗಿಸುವ ಕೃತ್ಯವಾಗಿದೆ. ಹೀಗಾಗಿ ಎರಡು ರಾಜ್ಯದ ಮುಖ್ಯಮಂತ್ರಿಗಳು ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ಪರಿಹಾರದ, ರಕ್ಷಣೆ ಜೊತೆಗೆ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ದೇಶದಲ್ಲಿ ದಲಿತ ಮಹಿಳೆಯರ ಮೇಲೆ ಅತಿ ಹೆಚ್ಚು ಕೇಂದ್ರಿತವಾಗಿ ದಾಳಿ, ದಬ್ಬಾಳಿಕೆ, ಅತ್ಯಾಚಾರ ಹಾಗೂ ಕೊಲೆಗಳು ನಡೆಯುತ್ತಿರುವುದು ಆತಂತಕಾರಿ ಬೆಳವಣಿಗೆಯಾಗಿದೆ. ಪರಿಣಾಮ ದಲಿತ ಸಮುದಾಯಗಳ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ.
ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ನಿಯಂತ್ರಿಸಲು ಎಲ್ಲ ರಾಜ್ಯಗಳಲ್ಲಿ ಮಹಿಳೆಯರ ರಕ್ಷಣೆಗಾಗಿ ಕಠಿಣ ಕಾನೂನುಗಳು ಮತ್ತು ಜಸ್ಟೀಸ್ ವರ್ಮಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲು ಸರ್ಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸ್ಥಳೀಯ ಸೇವಾಲಾಲ ಬಂಜಾರ ವೇದಿಕೆಯ ಕಾರ್ಯಕರ್ತರು ನೀಡಿದ ಮನವಿ ಪತ್ರವನ್ನು ಸ್ವೀಕರಿಸಿದ ತಹಸೀಲ್ದಾರ್ ಅಶೋಕ ಕಲಘಟಗಿ, ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಪತ್ರವನ್ನು ರವಾನಿಸಲಾಗುವುದು ಎಂದರು.
ಪುರಸಭೆ ಸದಸ್ಯ ರೂಪ್ಲೇಶ ರಾಠೋಡ, ವೇದಿಕೆಯ ಅಧ್ಯಕ್ಷ ಉಮೇಶ ರಾಠೋಡ, ಮುಖಂಡರಾದ ಈಶಪ್ಪ ರಾಠೋಡ, ಪ್ರಶಾಂತ ರಾಠೋಡ, ಬಾಲು ರಾಠೋಡ, ಮಾರುತಿ ಅಜ್ಮೀರ, ಮಾರುತಿ ರಾಠೋಡ, ಮುತ್ತು ರಾಠೋಡ ಸೇರಿ ಇತರರು ಇದ್ದರು.
ಜಸ್ಟಿಸ್ ವರ್ಮಾ ಸಮಿತಿ ಶಿಫಾರಸು ಜಾರಿಗೆ ಆಗ್ರಹ
Advertisement