ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಜಿಲ್ಲಾಡಳಿತದ ನಿರ್ದೆಶನದ ಮೇರೆಗೆ ಮಂಗಳವಾರ ಶಿರಹಟ್ಟಿಯ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ ತಾಲೂಕಾ ಆಡಳಿತದ ವತಿಯಿಂದ ಮೇವು ಬ್ಯಾಂಕ್‌ನ್ನು ಜಿ.ಪಂ ಮುಖ್ಯ ಯೋಜನಾಧಿಕಾರಿ ಹಾಗೂ ತಾಲೂಕಾ ನೋಡಲ್ ಅಧಿಕಾರಿ ನಿರ್ಮಲಾ ಎನ್.ಕೆ ರೈತರಿಗೆ ಮೇವು ವಿತರಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ತಹಸೀಲ್ದಾರ ಅನಿಲ ಬಡಿಗೇರ, ಜಿಲ್ಲಾಡಳಿತದ ನಿರ್ದೆಶನದ ಮೇರೆಗೆ ಶಿರಹಟ್ಟಿಯಲ್ಲಿ ಮೇವು ಬ್ಯಾಂಕ್‌ನ್ನು ತೆರೆಯಲಾಗಿದ್ದು, ಸದ್ಯ 7.8 ಟನ್ ಮೇವು ಸಂಗ್ರಹವಿದೆ. ಜಾನುವಾರುಗಳನ್ನು ಹೊಂದಿದಂತಹ ರೈತರು ಪಶುವೈದ್ಯಾಧಿಕಾರಿಗಳ ದೃಢೀಕರಣದ ಮೇರೆಗೆ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಸರಕಾರ ನಿಗದಿಪಡಿಸಿದ ಪ್ರತಿ ಕೆಜಿಗೆ 2 ರೂ.ನಂತೆ ಮೇವು ವಿತರಿಸಲು ಕ್ರಮ ಕೈಕೊಳ್ಳಲಾಗಿದೆ.
ಬರಗಾಲವನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಟಾಸ್ಕ್ಫೋರ್ಸ್ ಸಮಿತಿ ವತಿಯಿಂದ ಸಭೆ ನಡೆಸಲಾಗಿದ್ದು, ಇಲ್ಲಿಯವರೆಗೂ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿಲ್ಲ. ಆದಾಗ್ಯೂ ಮುಂಜಾಗ್ರತಾ ಕ್ರಮವಾಗಿ ಗ್ರಾಮ ಪಂಚಾಯತ ಮಟ್ಟದಲ್ಲಿ ಇರುವಂತಹ ಖಾಸಗಿ ಬೋರ್‌ವೆಲ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಚರ್ಚಿಸಲಾಗಿದೆ ಎಂದರು.
ತಾ.ಪಂ ಇಓ ಪ್ರಶಾಂತ ರಾವ್, ಪಶು ವೈದ್ಯಾಧಿಕಾರಿ ಡಾ. ಎನ್.ಎಚ್. ಓಲೇಕಾರ, ಪ.ಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಕಂದಾಯ ಇಲಾಖೆಯ ಎಸ್.ಎಸ್. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.