ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಾಧನೆ ಮಾಡಬೇಕೆನ್ನುವವರಿಗೆ ಮೊದಲು ಗುರಿ ಇರಬೇಕು. ಇದರ ಜೊತೆಗೆ ಕಠಿಣ ಪರಿಶ್ರಮ, ಶ್ರದ್ಧೆ, ನಿಷ್ಠೆಗಳನ್ನು ಮೈಗೂಡಿಸಿಕೊಂಡಲ್ಲಿ ಉನ್ನತ ಸಾಧನೆ ಮಾಡುವದು ಅಸಾಧ್ಯವೆನಲ್ಲ. ಅಲ್ಲದೆ, ಪ್ರತಿಭೆಗಳಿಗೆ ಯಾವುದೇ ಜಾತಿ, ಮತ ಪಂಥಗಳು ಇರುವದಿಲ್ಲ ಎಂದು ಅನುಜಾ ಪೂಜಾರ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಪಾಂಡುರಂಗ ದೇವಸ್ಥಾನದಲ್ಲಿ ದಿಂಡಿ ಉತ್ಸವದ ಅಂಗವಾಗಿ ಸೋಮವಾರ ರಾತ್ರಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಗೀತ, ಬಾರೂಢ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಪ್ರತಿಯೊಂದು ಸಮಾಜದವರೂ ನಮ್ಮ ಸಮಾಜ ಸಣ್ಣದು ಎನ್ನುವ ಭಾವನೆ ದೂರ ಮಾಡಿಕೊಳ್ಳಬೇಕಾಗಿದೆ.
ಎಲ್ಲ ಸಮಾಜಗಳು ಇಂದು ಸಾಕಷ್ಟು ಪ್ರಗತಿಯನ್ನು ಕಾಣುತ್ತಿವೆ. ದೇವನೊಬ್ಬ ನಾಮಹಲವು ಎನ್ನುವಂತೆ ದೇವರು ಎಲ್ಲರಿಗೂ ಒಂದೇ ಆಗಿದ್ದಾನೆ. ಹಿರಿಯರು, ಸಂಸ್ಕೃತಿ-ಸಂಪ್ರದಾಯಗಳನ್ನು ಮಕ್ಕಳಲ್ಲಿ ಬೆಳೆಸುವ ಕಾರ್ಯವನ್ನು ಸಮಾಜದ ಹಿರಿಯರು ಮಾಡಬೇಕಾಗಿದೆ. ಇಂದು ಸನ್ಮಾನಗೊಳ್ಳುತ್ತಿರುವ ಮಕ್ಕಳು ಉತ್ತಮ ಸಾಧನೆ ಮಾಡಿರುವದು ಸಮಾಜಕ್ಕೆ ಹೆಮ್ಮೆಯ ಸಂಗತಿ ಎಂದರು.
ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ಶ್ರೇಷ್ಠಾ ನವಲೆ, ಸ್ಕ್ವಾಯ್ ಮಾರ್ಷಲ್ ಆರ್ಟ್ ಕ್ರೀಡೆಯಲ್ಲಿ ಸಾಧನೆಗೈದ ಮಾನ್ಯತಾ ಶಿವಪ್ರಸಾದ ಕೋಟಿಮಠ ಹಾಗೂ ಮನೋಜ್ಞಾ ಕೋಟಿಮಠ ಇವರುಗಳನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಮಾಜದ ಹಿರಿಯ ಪುಂಡಲೀಕ ಮಾತಾಡೆ ವಹಿಸಿದ್ದರು. ಅತಿಥಿಗಳಾಗಿ ಸರಸ್ವತಿ ಅಗಡಿ, ವಿ.ಎಲ್. ಪೂಜಾರ, ಸತೀಶ ಮಾಂಡ್ರೆ, ಸಂತೋಷ ಸರ್ವದೆ, ವಾಸು ಬೋಮಲೆ, ಅರುಣ ನವಲೆ, ಪ್ರವೀಣ ಬೋಮಲೆ, ಶಂಕರ ಮಾತಾಡೆ, ಪ್ರವೀಣ ಮಾತಾಡೆ, ಸಂಜೀವ ಮಾಂಡ್ರೆ, ರಮೇಶ ನವಲೆ, ವೆಂಕಟೇಶ ಮಾತಾಡೆ ಸೇರಿ ಅನೇಕರಿದ್ದರು.
ಪ್ರಭಾಕರ ಬೋಮಲೆ ಸ್ವಾಗತಿಸಿದರು. ಬಿಂಕದಕಟ್ಟಿ, ಖಂಡೋಬಾ ನವಲೆ ನಿರೂಪಿಸಿದರು. ಕಿರಣ ನವಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಿಯಾಂಕಾ ಹಾವೇರಿ, ಶ್ರೀಹರಿ ಕ್ಷತ್ರಿಯ, ಕೃಷ್ಣ ಕ್ಷತ್ರಿಯ ಇವರಿಂದ ಸಂಗೀತ ಸೇವೆ, ನಂತರ ಬಾರೂಢ ಕಾರ್ಯಕ್ರಮ ಜರುಗಿತು.
ಚಂದ್ರಣ್ಣ ಮಹಾಜನಶೆಟ್ಟರ ಮಾತನಾಡಿ, ಸನ್ಮಾನಗಳು ಜವಾಬ್ದಾರಿಯನ್ನು ಹೆಚ್ಚಿಸುವದರ ಜೊತೆಗೆ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬ ಹಂಬಲ ಬೆಳೆಸುತ್ತದೆ. ಸಾಧನೆ ಮಾಡಬೇಕೆಂಬ ಇಚ್ಛೆಯಿಂದ ಸಾಗಿದರೆ ಎಲ್ಲರೂ ಸಾಧನೆ ಮಾಡಬಹುದು. ಆದರೆ ನಮ್ಮಲ್ಲಿರುವ ಕೀಳರಿಮೆಯಿಂದ ನಾವು ಹಿಂದುಳಿಯುವಂತಾಗಿದೆ. ನಮ್ಮ ಸಂಸ್ಕೃತಿ-ಸಂಪ್ರದಾಯಗಳನ್ನು ನಮ್ಮ ಮಕ್ಕಳಿಗೆ ಕಲಿಸಿಕೊಡುವದು ಇಂದಿನ ಅಗತ್ಯವಾಗಿದೆ. ಭಾವಸಾರ ಕ್ಷತ್ರಿಯ ಸಮಾಜ ಇಂದು ಪಟ್ಟಣದಲ್ಲಿ ಎಲ್ಲರೂ ಮೆಚ್ಚುವಂತೆ ಪಾಂಡುರಂಗ ದೇವಸ್ಥಾನವನ್ನು ನಿರ್ಮಾಣ ಮಾಡಿರುವದು ಅವರ ಕಾರ್ಯತತ್ಪರತೆಗೆ ಸಾಕ್ಷಿಯಾಗಿದೆ ಎಂದರು.