ವಿಜಯಸಾಕ್ಷಿ ಸುದ್ದಿ, ಧಾರವಾಡ : ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ರಾಜ್ಯ ಸರ್ಕಾರವು ಧಾರವಾಡ ಜಿಲ್ಲೆ ಪೂರ್ಣ ಬರಪೀಡಿತ ಜಿಲ್ಲೆಯೆಂದು ಘೋಷಿಸಿತು. ಅಂದಿನಿಂದ ಧಾರವಾಡ ಜಿಲ್ಲಾಡಳಿತವು ಜನ, ಜಾನುವಾರುಗಳಿಗೆ ಅಗತ್ಯವಾದ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮತ್ತು ಜನರಿಗೆ ನರೇಗಾ ಯೋಜನಯಡಿ ಉದ್ಯೋಗ ನೀಡಲು ಕಾರ್ಯಾರಂಭ ಮಾಡಿತು.
ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ಗ್ರಾಮಗಳಿಗೆ ಈಗಾಗಲೇ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಾನುವಾರುಗಳಿಗೆ ಅಗತ್ಯವಿರುವ ಮೇವು ಸರಬರಾಜು ಮಾಡಲು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ 7 ಮೇವು ಬ್ಯಾಂಕಗಳನ್ನು ತರೆಯಲಾಗಿದ್ದು, ಈಗಾಗಲೇ ರೈತರು ಮೇವು ಖರೀದಿ ಮಾಡುತ್ತಿದ್ದಾರೆ.
ರೈತರಿಗೆ ಮೇವು ಬ್ಯಾಂಕ್, ಮೇವು ಮಾರಾಟದ ಬಗ್ಗೆ ಮಾಹಿತಿ ನೀಡಲು ಮತ್ತು ಬರ ಪರಿಸ್ಥಿತಿಯಲ್ಲಿ ರೈತರಿಗೆ ಧೈರ್ಯ ತುಂಬಲು ಧಾರವಾಡ ಜಿಲ್ಲಾಡಳಿತವು `ರೈತರೊಂದಿಗೆ ನಾವಿದ್ದೇವೆ…’ ಎಂಬ ವಿನೂತನ ಅಭಿಯಾನವನ್ನು ಆರಂಭಿಸಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಜಿಲ್ಲೆಯ ರೈತರಿಗೆ ಕುಡಿಯುವ ನೀರು, ಜಾನುವಾರು ಮೇವು ಲಭ್ಯತೆಯ ಬಗ್ಗೆ ಮಾಹಿತಿ ನೀಡಲು ಮತ್ತು ಬರಪರಿಹಾರ ಪೂರಕ ಸೌಲಭ್ಯ ದೊರಕಿಸಲು ಅನುಕೂಲವಾಗುವಂತೆ ಕಂದಾಯ ಇಲಾಖೆ, ಪಶು ಇಲಾಖೆ ಹಾಗೂ ಪಂಚಾಯತ ರಾಜ್ ಇಲಾಖೆಗಳ ಸಹಯೋಗದಲ್ಲಿ ರೈತರಿಗೆ ಸರ್ಕಾರ, ಜಿಲ್ಲಾಡಳಿತ ನಿಮ್ಮ ನೆರವಿಗೆ ಇದೆ ಎಂಬುದನ್ನು ತಿಳಿಸಲು ಈ ವಿನೂತ ಅಭಿಯಾನ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಯಾವುದೇ ಒತ್ತಡಗಳಿಗೆ ಒಳಗಾಗದೇ ರೈತರು ತಮ್ಮ ಜಾನುವಾರುಗಳನ್ನು ಜೋಪಾನ ಮಾಡಬೇಕು.
ಜಿಲ್ಲೆಯಲ್ಲಿ ಮುಂದಿನ 8 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ರೈತರು ಸಹ ಮೇವಿನ ಬಣವೆ ಹೊಂದಿದ್ದಾರೆ. ಜಿಲ್ಲಾಡಳಿತದಿಂದ ಜಿಲ್ಲೆಯ ಎಪಿಎಂಸಿಗಳು ಸೇರಿದಂತೆ 7 ಸ್ಥಳಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ. ಈ ಮಾಹಿತಿಯನ್ನು ಪ್ರತಿ ರೈತರಿಗೆ ತಲುಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಏ.2ರ ಬೆಳಿಗ್ಗೆ ಎಸಿ ಶಾಲಂ ಹುಸೇನ್, ತಹಸೀಲ್ದಾರ ಡಾ. ಡಿ.ಎಚ್. ಹೂಗಾರ ಹಾಗೂ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ರವಿ ಸಾಲಿಗೌಡರ ನೇತೃತ್ವದಲ್ಲಿ ಧಾರವಾಡ ತಾಲೂಕಾಡಳಿತದಿಂದ ಧಾರವಾಡ ಹಳೆ ಎಪಿಎಂಸಿಯ ದನಗಳ (ಮಾರಾಟ) ಸಂತೆ ಜಾಗದಲ್ಲಿ ರೈತರಿಗೆ ಧ್ವನಿವರ್ಧಕ ಬಳಸಿ ಜಾಗೃತಿ ಮೂಡಿಸುವ ಮೂಲಕ ಅಭಿಯಾನ ಆರಂಭಿಸಲಾಯಿತು.
ಮೇವು ಲಭ್ಯತೆ, ದಾಸ್ತಾನು ಬಗ್ಗೆ ಹಾಗೂ ಕುಡಿಯುವ ನೀರಿನ ಕೊರತೆ ಇಲ್ಲ ಎಂಬುವುದರ ಬಗ್ಗೆ ಸಾಕಷ್ಟು ಸಲ ಮಾಧ್ಯಮ, ಗ್ರಾಮ ಪಂಚಾಯಿತಿಗಳ ಮೂಲಕ ರೈತರಿಗೆ ಮಾಹಿತಿ ನೀಡಲಾಗಿದೆ. ಈಗಲೂ ಕಂದಾಯ ಇಲಾಖೆ ಮತ್ತು ಗ್ರಾ.ಪಂ ಮೂಲಕ ಗ್ರಾಮಗಳಲ್ಲಿ ಡಂಗುರ ಸಾರಿ, ಸಾರ್ವಜನಿಕರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಜಿಲ್ಲೆಯ ಧಾರವಾಡ ತಾಲೂಕಿನ ಮಾದನಬಾವಿಯಲ್ಲಿ ಫೆ.೨೮ರಂದು ಮೊದಲ ಮೇವು ಬ್ಯಾಂಕ್ ತೆರೆಯಲಾಗಿತ್ತು. ಧಾರವಾಡ ತಾಲೂಕಿನ ಮಾಧನಬಾವಿ, ಧಾರವಾಡ ಎಪಿಎಂಸಿ., ಹುಬ್ಬಳ್ಳಿ ತಾಲೂಕಿನ ಶರೇವಾಡ ಮತ್ತು ಶಿರಗುಪ್ಪಿ, ಕಲಘಟಗಿ ಎ.ಪಿ.ಎಂ.ಸಿ., ಕುಂದಗೋಳ ಎ.ಪಿ.ಎಂ.ಸಿ., ನವಲಗುಂದ ಎ.ಪಿ.ಎಂ.ಸಿ. ಸೇರಿ ಒಟ್ಟು 7 ಸ್ಥಳಗಳಲ್ಲಿ ರೈತರ ಬೇಡಿಕೆಯಂತೆ ಈಗಾಗಲೇ ಜಿಲ್ಲಾಡಳಿತದಿಂದ ಮೇವು ಬ್ಯಾಂಕ್ ತೆರೆಯಲಾಗಿದೆ.
ಧಾರವಾಡ, ಹುಬ್ಬಳ್ಳಿ ಮತ್ತು ಕಲಘಟಗಿ ಮೇವು ಬ್ಯಾಂಕ್‌ಗಳಿಂದ ಈಗಾಗಲೇ ಸುಮಾರು 38 ಜನ ರೈತರು 24.02 ಟನ್ ಮೇವು ಖರೀದಿಸಿದ್ದಾರೆ. ಮೇವು ಬ್ಯಾಂಕ್‌ಗಳಲ್ಲಿ ಒಟ್ಟು ಸಂಗ್ರಹಿತ 47.16 ಟನ್ ಮೇವಿನಲ್ಲಿ ಇನ್ನೂ 23.14 ಟನ್ ಮೇವು ಮಾರಾಟಕ್ಕೆ ಲಭ್ಯವಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಮೇವು ಪೂರೈಸಲು ಜಿಲ್ಲಾಡಳಿತ ಸಿದ್ಧವಿದೆ ಎಂದು ತಿಳಿಸಲಾಗಿದೆ.