ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಶ್ರೀ ಕರಿಯಮ್ಮದೇವಿ ದೇವಸ್ಥಾನ ಸುಧಾರಣಾ ಸಮಿತಿ ಮತ್ತು ಶ್ರೀ ಕರಿಯಮ್ಮದೇವಿ ಜಾತ್ರಾ ಮಹೋತ್ಸವ ಸಮಿತಿಯ ವತಿಯಿಂದ ಮಂಗಳವಾರ ತೇರಿನ ಗಾಲಿ ಪೂಜೆಯ ಪೂರ್ವಸಿದ್ಧತೆ ಹಾಗೂ ಪೂಜಾ ಸಮಾರಂಭ ಜರುಗಿತು.
ಶ್ರೀ ಕರಿಯಮ್ಮದೇವಿ ದೇವಸ್ಥಾನ ಸುಧಾರಣಾ ಸಮಿತಿಯ ಸಿ.ಕೆ. ಮಾಳಶೆಟ್ಟಿಯವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಶುಕ್ರವಾರ ಮಂಗಳವಾದ್ಯಗಳೊಂದಿಗೆ ಕಳಸದ ಮೆರವಣಿಗೆ, ಏ.9ರಂದು ಸಾಯಂಕಾಲ 5.30 ಗಂಟೆಗೆ ಸಕಲ ಮಂಗಳ ವಾದ್ಯಗಳೊಂದಿಗೆ ಮಹಾರಥೋತ್ಸವ ಜರುಗುವುದು. ಸದ್ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದರು.
ಶ್ರೀ ಕರಿಯಮ್ಮದೇವಿ ಜಾತ್ರಾ ಮಹೋತ್ಸವ ಕಮಿಟಿಯ ಅಧ್ಯಕ್ಷ ಜಗದೀಶ ಪೂಜಾರ ಮಾತನಾಡಿ, ಕರಿಯಮ್ಮದೇವಿಯ ವಿಶೇಷ ಅಲಂಕಾರದೊಂದಿಗೆ ದೇವಿಯ ಪೂಜೆ ಕಾರ್ಯಕ್ರಮಗಳು ಸಾಂಪ್ರದಾಯಿಕವಾಗಿ ವಿಧಿ-ವಿಧಾನಗಳೊಂದಿಗೆ ಜರುಗುವುದು. ಇದೇ ಸಂದರ್ಭದಲ್ಲಿ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಸೇರಿದಂತೆ ಮಕ್ಕಳಿಗಾಗಿ ರಂಗೋಲಿ ಸ್ಪರ್ಧೆ ಜರುಗಲಿದೆ. ಏ. 10ರ ಮಧ್ಯಾಹ್ನ 1 ಗಂಟೆಗೆ ಮಹಾ ಅನ್ನಸಂತರ್ಪಣೆ, ಸಾಯಂಕಾಲ 5.30 ಗಂಟೆಗೆ ಕಡುಬಿನ ಕಾಳಗ ಜರುಗುವುದು. ಸದ್ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ವಾಯ್.ಕೆ. ಪಿಡಗಣ್ಣವರ, ಜಿ.ಕೆ. ತಮ್ಮಣ್ಣವರ, ಪಿ.ಬಿ. ಹಿರೇಮಠ, ಹೆಚ್.ಬಿ. ಶಿರಗುಂಪಿ, ಎಸ್.ಎಸ್. ಹೊಳೆಯಣ್ಣವರ, ಆರ್.ಬಿ. ಕುಲಕರ್ಣಿ, ಎಂ.ಬಿ. ದೇಸಾಯಿಗೌಡ್ರ, ಗುರಣ್ಣ ಕಲಕೇರಿ, ಮಹಾಂತೇಶ ಬೆಳಗಲಿ, ಮುತ್ತು ಮಾಲಗಿತ್ತಿ, ಕಿರಣ ಆರಟ್ಟಿ, ಬಸವರಾಜ ಅಣ್ಣಿಗೇರಿ, ಆನಂದ ಕಂಪ್ಲಿ, ಹಿರಿಯ ಮುಖಂಡ ಶಶಿಧರ ದಿಂಡೂರ, ಗಣ್ಯ ವ್ಯಾಪಾರಸ್ಥರಾದ ರಾಜು ಪರಮಣ್ಣವರ, ಮುಖಂಡ ಸುನೀಲ ಕುಂದಗೋಳ ಸೇರಿದಂತೆ ಶ್ರೀ ಕರಿಯಮ್ಮದೇವಿ ದೇವಸ್ಥಾನ ಸುಧಾರಣಾ ಸಮಿತಿಯ ಸರ್ವ ಸದಸ್ಯರು, ಜಾತ್ರಾ ಕಮಿಟಿಯ ಸರ್ವ ಸದಸ್ಯರು, ಓಣಿಯ ಹಿರಿಯರು, ಸದ್ಭಕ್ತರು ಉಪಸ್ಥಿತರಿದ್ದರು.