ವಿಜಯಸಾಕ್ಷಿ ಸುದ್ದಿ, ಗದಗ : ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬ ಇದ್ದಂತೆ. ಎಲ್ಲರೂ ಖುಷಿಯಿಂದ ಪಾಲ್ಗೊಳ್ಳಬೇಕು ಎಂದು ಜಿ.ಪಂ ಉಪಕಾರ್ಯದರ್ಶಿ ಸಿ.ಬಿ. ದೇವರಮನಿ ಹೇಳಿದರು.
ಗದಗ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಕಂದಕ ಬದು ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿ, ನಂತರ ಗದಗ ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಸ್ವೀಪ್ ಸಮಿತಿಯಿಂದ ಆಯೋಜಿಸಲಾಗಿದ್ದ ವಿಶೇಷ ಮತದಾನ ಜಾಗೃತಿ ಹಾಗೂ ಮತದಾನ ಪ್ರತಿಜ್ಞಾ ವಿಧಿ ಬೋಧನೆ ಮಾಡಿ ಮಾತನಾಡಿದರು.
ಲೋಕಸಭೆ ಚುನಾವಣೆ-2024 ಅಂಗವಾಗಿ ಮತದಾರ ಜಾಗೃತಿ ಮೂಡಿಸಲು ವಿಶೇಷವಾಗಿ ಕಾರ್ಯಕ್ರಮ ಆಯೋಜನೆ ಮಾಡಿರುವುದು ಅತ್ಯಂತ ಖುಷಿಯ ವಿಚಾರವಾಗಿದೆ. ದೇಶ, ನಾಡು ಕಟ್ಟುವಲ್ಲಿ ಪ್ರತಿಯೊಬ್ಬರ ಮತ ಮುಖ್ಯವಾಗಿರುತ್ತದೆ. ಯಾರೊಬ್ಬರೂ ಮತದಾನ ಮಾಡಲು ನಿಷ್ಕಾಳಜಿ ತೋರಬಾರದು. ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬವಾಗಿದೆ. ಯಾವುದೇ ಆಸೆ-ಆಮಿಷಕ್ಕೆ ಒಳಗಾಗದೆ ಖುಷಿಯಿಂದ ಮತ ಚಲಾಯಿಸಬೇಕೆಂದು ಹೇಳಿದರು.
ತಾ.ಪಂ ಸಹಾಯಕ ನಿರ್ದೇಶಕ ಕುಮಾರ್ ಪೂಜಾರ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತಕ್ಕೂ ಒಂದೇ ಮೌಲ್ಯ ಇರುತ್ತದೆ. ಯಾರೂ ಕೂಡ ಅಸಡ್ಡೆ ತೋರಕೂಡದು. ನಮ್ಮ ಹಕ್ಕನ್ನು ನಾವು ಕಡ್ಡಾಯವಾಗಿ ಚಲಾಯಿಸಬೇಕು ಎಂದು ತಿಳಿಸಿದರು.
ಕಾಮಗಾರಿ ಸ್ಥಳದಲ್ಲಿ ಹಾಜರಿದ್ದ ಕೂಲಿಕಾರರ ಸಹಾಯದಿಂದ `ಮೇ 7′ ಎಂದು ಚಿತ್ರ ಬಿಡಿಸಲಾಯಿತು. ನಂತರ ಪ್ರತಿಜ್ಞಾ ವಿಧಿ ಭೋದನೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾ.ಪಂ ಸಹಾಯಕ ನಿರ್ದೇಶಕ ಕುಮಾರ್ ಪೂಜಾರ್, ಜಿ.ಪಂ ನರೇಗಾ ಸಿಬ್ಬಂದಿಗಳಾದ ಎಡಿಪಿಸಿ ಕಿರಣ್ ಕುಮಾರ್, ಡಿಎಮ್‌ಆಯ್‌ಎಸ್ ಮಲ್ಲಿಕಾರ್ಜುನ ಸರ್ವಿ, ಡಿಐಇಸಿ ವಿ.ಬಿ. ಸಜ್ಜನ ಹಾಗೂ ತಾಲೂಕು ನರೇಗಾ ಸಿಬ್ಬಂದಿ ಟಿಐಇ ಸಿ.ವಿರೇಶ್, ಬಿಎಫ್‌ಟಿ ಸೋಮಶೇಖರ್, ಗಿರಿಜಾ ಮತ್ತು ನರೇಗಾ ಕೂಲಿಕಾರರು ಹಾಜರಿದ್ದರು.
ಮತಗಟ್ಟೆ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳ ಕುರಿತು ಸವಿಸ್ತಾರವಾಗಿ ತಿಳಿಸಿದ ಸಿ.ಬಿ. ದೇವರಮನಿ, 18 ವರ್ಷ ಮೇಲ್ಪಟ್ಟ ಯುವಕರು, ವೃದ್ಧರು, ವಿಕಲಚೇತನ ಮತದಾರರು ನಿರ್ಭೀತಿಯಿಂದ ಮೇ 7ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ ಶೇ.100ರಷ್ಟು ಮತದಾನ ಮಾಡಿ ಯೋಗ್ಯ ಹಾಗೂ ಸಮರ್ಥ ನಾಯಕರನ್ನು ಆಯ್ಕೆ ಮಾಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.