Home Blog

ರಾಘವೇಂದ್ರ ಸ್ವಾಮಿ ಮಠದಲ್ಲಿ ಕಳ್ಳರ ಕೈಚಳಕ: 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ!

0

ಹಾವೇರಿ: ನಗರದ ಹೃದಯಭಾಗದಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಳ್ಳರು ಕೈಚಳಕ ತೋರಿದ್ದು, 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ‌ಮಾಡಿದ್ದಾರೆ.

ಮಠದ ಎರಡು ಕೋಣೆಯ ಬೀಗ ಮುರಿದಿರುವ ಕಳ್ಳರು, 10,67,668 ರೂ. ಮೌಲ್ಯದ ಚಿನ್ನ, ಬೆಳ್ಳಿ, ತಾಮ್ರ ಹಾಗೂ ಹಿತ್ತಾಳೆಯ ವಸ್ತುಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ಡಾ. ವೀಣಾ ಎಸ್ ಮತ್ತು ಶ್ರೀನಿವಾಸ ವೈದ್ಯರಿಂದ ಪೊಲೀಸರಿಗೆ ದೂರು ನೀಡಲಾಗಿದೆ. ದೂರಿನ ಅನ್ವಯ ಸ್ಥಳಕ್ಕೆ ಹಾವೇರಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳ್ಳತನವಾದ ವಸ್ತುಗಳು:

15 ಗ್ರಾಂ ಬಂಗಾರದ ಸರದ ಹುಕ್ಕು – 1,79,550 ರೂ.

18 ಗ್ರಾಂ ಬಂಗಾರದ ಸರ + ಒಂದು ಹುಕ್ಕು – 2,15,460 ರೂ.

6 ಗ್ರಾಂ ಬಂಗಾರದ ಪುಷ್ಪ ಎಲೆ – 71,820 ರೂ.

2 ಬೆಳ್ಳಿ ತಂಬಿಗೆ, 6 ಬೆಳ್ಳಿ ಆಚುಮ್ಯ ಲೋಟ, 6 ಬೆಳ್ಳಿ ಉದ್ದರಣಿ, 2 ಬೆಳ್ಳಿ ತಟ್ಟೆ, 1 ಬೆಳ್ಳಿ ಆರತಿ – 2,70,920 ರೂ.

75 ಕೆ.ಜಿ ರಥದ ಮೇಲಿನ ಹಿತ್ತಾಳೆಯ 3 ಕಳಸ – 1,00,000 ರೂ.

60 ಕೆ.ಜಿ ಹಿತ್ತಾಳೆಯ 20 ಪಾತ್ರೆಗಳು – 42,000 ರೂ.

18 ಕೆ.ಜಿ ತಾಮ್ರದ 50 ತಂಬಿಗಳು – 17,928 ರೂ.

207 ಕೆ.ಜಿ ಹಿತ್ತಾಳೆಯ 2 ಸಾಲು ದೀಪಗಳು – 42,000 ರೂ.

40 ಕೆ.ಜಿ ಹಿತ್ತಾಳೆಯ 20 ಗಂಟೆಗಳು – 20,000 ರೂ.

ಒಟ್ಟು ಹಾನಿ: 10,67,668 ರೂ.

ಘಟನೆ ಸಂಬಂಧ ಹಾವೇರಿ ನಗರ ಪೊಲೀಸ್ ಠಾಣೆಯು ಕಳ್ಳರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದೆ.

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಭವನದಲ್ಲೇ ನಾಯಿಗಳ ಕಾಟ – ಕಚೇರಿ ಸಿಬ್ಬಂದಿ ಸುಸ್ತೋ ಸುಸ್ತು!

0

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಮುಖ ಜವಾಬ್ದಾರಿಗಳೆಲ್ಲ ನಡೆಯುವ ಜಿಲ್ಲಾಡಳಿತ ಭವನದಲ್ಲಿ ನಾಯಿಗಳ ಹಾವಳಿ ಹೆಚ್ಚುತ್ತಿದೆ.

ಪ್ರತಿ ದಿನ ಭವನಕ್ಕೆ ಜನರು ವಿವಿಧ ಕೆಲಸಗಳಿಗೆ ಬರುತ್ತಾರೆ. ಆದರೆ ನಾಯಿಗಳು ಭವನದ ಎಲ್ಲಾ ಕೋಣೆಗಳಿಗೆ ತಮ್ಮ ಹಕ್ಕು ವಹಿಸಿಕೊಂಡಂತೆ ವರ್ತಿಸುತ್ತಿವೆ.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಒಂದಲ್ಲ ಎರಡಲ್ಲ 18ಕ್ಕೂ ಹೆಚ್ಚು ನಾಯಿಗಳು ಇವೆ. ಒಂದೊಂದು ನಾಯಿಗಳು ಒಂದೊಂದು ಕಚೇರಿಯನ್ನು ಹಂಚಿಕೊಂಡಂತೆ ಕಂಡು ಬಂದಿದೆ. ಆ ಕಚೇರಿ ಹತ್ತಿರ ಹೊದ್ರೆ, ಅಲ್ಲೊಂದು ಬೌ ಎನ್ನುತ್ತೆ, ಈ ಕಡೆ ಕಚೇರಿಗೆ ಬಂದ್ರೆ ಇಲ್ಲೊಂದು ಬೌ ಬೌ ಎನ್ನುತ್ತೆ, ಇಲ್ಲಿರುವ ನಾಯಿಗಳು ಕೆಲವು ಸಿಬ್ಬಂದಿಗಳಿಗೆ ಅಭ್ಯಾಸವಾಗಿದ್ರೆ. ಕಚೇರಿಗೆ ಬರೊ ಸಾರ್ವಜನಿಕರನ್ನ ಕಂಡ್ರೆ ಬೌ ಬೌ ಮಾಡ್ತಿವೆ.

ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ನಾಯಿಗಳಿಂದ ಎಚ್ಚರ ವಹಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ, ಭವನಕ್ಕೆ ಭೇಟಿ ನೀಡುವವರಿಗೆ ಮುಂಚಿತ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಮಹಿಳೆ ಮೇಲೆ ಹಲ್ಲೆ, ಚಿನ್ನಾಭರಣ ಕಳವು: ತಂಗಿ ಮಗನಿಂದಲೇ ಕೃತ್ಯ

0

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಕ್ರಾಸ್ ಬಳಿ ಮಹಿಳೆಯೋರ್ವರ ಮನೆಯಲ್ಲಿ ಕಳ್ಳತನ ನಡೆದಿದೆ.

ವೀರಮ್ಮ ಅವರ ಮನೆಗೆ ನುಗ್ಗಿದ ಕಳ್ಳ, ಮಹಿಳೆ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ದರೋಡೆ ಮಾಡಿ ಎಸ್ಕೇಪ್ ಆಗಿದ್ದ. ಮಹಿಳೆ ಪತಿ ಉಮಾಪತಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ನವೀನ್ ಎಂದು ಗುರುತಿಸಲಾಗಿದೆ. ಅಚ್ಚರಿ ಸಂಗತಿ ಅಂದ್ರೆ, ಹಲ್ಲೆಗೊಳಗಾದ ವೀರಮ್ಮ ಅವರ ತಂಗಿ ಮಗನಿಂದಲೇ ಈ ಕೃತ್ಯ ನಡೆದಿದೆ. ಆರೋಪಿ ಹಣಕ್ಕಾಗಿ ಈ ಕೃತ್ಯ ಎಸಗಿರುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

ಘಟನೆಯಲ್ಲಿ ವೀರಮ್ಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಬಂಧಿಸಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

ಇಂಧನ ಸೋರಿಕೆ – ವಾರಣಾಸಿಯಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ; ತಪ್ಪಿದ ದುರಂತ

0

ವಾರಣಾಸಿ: ಲಕ್ನೋದಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವು ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ವಿಮಾನದಲ್ಲಿ ಇಂಧನ ಸೋರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಪೈಲಟ್ ತಕ್ಷಣ ಕ್ರಮ ಕೈಗೊಂಡಿದ್ದಾರೆ. ವಿಮಾನದಲ್ಲಿ 166 ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ತುರ್ತು ಭೂಸ್ಪರ್ಶದಿಂದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಅಧಿಕಾರಿಗಳು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿ ಇದೆ ಎಂದು ತಿಳಿಸಿದ್ದಾರೆ. ಉಳಿದ ವಿಮಾನಗಳ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.

ಇಂಧನ ಸೋರಿಕೆ ಕಂಡುಬಂದಂತೆಯೇ ಪೈಲಟ್ ತುರ್ತು ಕ್ರಮ ತೆಗೆದುಕೊಂಡಿದ್ದು, ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ – ನಾಳೆ ಗರ್ಭಗುಡಿ ಬಂದ್

0

ಹಾಸನ: ವರ್ಷದ ಮಹತ್ವಪೂರ್ಣ ಹಾಸನಾಂಬೆ ತಾಯಿ ದರ್ಶನಕ್ಕೆ ಇಂದು (ಬುಧವಾರ) ವಿಧ್ಯುಕ್ತ ತೆರೆ ಬಿದ್ದಿದ್ದು, ಭಕ್ತರು ಇಂದು ಮುಂಜಾನೆ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು.

14 ದಿನಗಳ ಸಾರ್ವಜನಿಕ ದರ್ಶನ ಅವಧಿಯಲ್ಲಿ ಈಗಾಗಲೇ 26 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದಾರೆ. ಧ್ರುವ ಸರ್ಜಾ, ಹರ್ಷ, ನಟಿ ಮಿಲನ ನಾಗರಾಜ್ ಸೇರಿದಂತೆ ಹಲವರು ಇಂದು ದರ್ಶನ ಪಡೆದಿದ್ದಾರೆ. ಸಂಜೆ 7 ರಿಂದ ರಾತ್ರಿ 12 ಗಂಟೆಯವರೆಗೆ ನೈವೇದ್ಯಕ್ಕಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು. ಮಧ್ಯರಾತ್ರಿ 12 ಗಂಟೆಯಿಂದ ನಾಳೆ ಬೆಳಿಗ್ಗೆ 5 ಗಂಟೆಯವರೆಗೆ ಸ್ಥಳೀಯರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಜಾತ್ರಾ ಮಹೋತ್ಸವದ ಹದಿಮೂರು ದಿನಗಳಲ್ಲಿ 1000 ರೂ., 300 ರೂ. ವಿಶೇಷ ಟಿಕೆಟ್ ಮಾರಾಟ ಮತ್ತು ಲಡ್ಡು ಮಾರಾಟದಿಂದ ದೇವಾಲಯಕ್ಕೆ ಒಟ್ಟು 22 ಕೋಟಿ ರೂ. ಆದಾಯ ಬಂದಿದೆ. ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಸ್ಥಳೀಯ ಅಧಿಕಾರಿಗಳು ತಾಯಿ ಸೇವೆಯಲ್ಲಿ ಭಾಗಿಯಾಗಿದ್ದರು.

ನಾಳೆ ಮಧ್ಯಾಹ್ನ 12 ಗಂಟೆಗೆ ವಿಶ್ವರೂಪ ದರ್ಶನದ ನಂತರ ಶಾಸ್ತ್ರೋಕ್ತವಾಗಿ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ.

ಮಧ್ಯರಾತ್ರಿ ಮನೆಗೆ ನುಗ್ಗಿ ಮಹಿಳೆ ಮೇಲೆ ಗ್ಯಾಂಗ್‌ರೇಪ್ ಕೇಸ್: ಮೂವರು ಅರೆಸ್ಟ್!

0

ಬೆಂಗಳೂರು:- ಗಂಗಗೊಂಡನಹಳ್ಳಿ ನಿವಾಸದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಾದಕನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕಾರ್ತಿಕ್, ಗ್ಲೇನ್, ಸಯೋಗ ಬಂಧಿತರು. ಪ್ರಕರಣ ಸಂಬಂಧ ಪ್ರಾಥಮಿಕ ತನಿಖೆಯಲ್ಲಿ, ಕೃತ್ಯವನ್ನು ಪೂರ್ವ ಯೋಜಿತವಾಗಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೊದಲು ಮನೆಯಲ್ಲಿದ್ದ ಇಬ್ಬರು ಪುರುಷರನ್ನು ಹಲ್ಲೆ ಮಾಡಿ ಕಟ್ಟಿಹಾಕಿ, ನಂತರ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗಳು ಮಹಿಳೆಯ ಮೊಬೈಲ್ ಮತ್ತು ₹50,000 ನಗದು ದೋಚಿದ್ದಾರೆ.

ಕೂಡಲೇ ಪ್ರಕರಣ ಸಂಬಂಧ ತನಿಖೆ ಕೈಗೊಂಡ ಪೋಲೀಸರು ಇದೀಗ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗೆ ಹುಡುಕಾಟ ಮುಂದುವರಿದಿದೆ.

WPL 2026: ಮಹಿಳಾ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ದಿನಾಂಕ ಫಿಕ್ಸ್!

0

ಮಹಿಳಾ ಪ್ರೀಮಿಯರ್ ಲೀಗ್ ನ ನಾಲ್ಕನೇ ಆವೃತ್ತಿಗೆ ಸಿದ್ಧತೆಗಳು ಜೋರಾಗಿವೆ. 2026ರ ಸೀಸನ್‌ಗೆ ಸಂಬಂಧಿಸಿದ ಮೆಗಾ ಹರಾಜು ಮುಂದಿನ ತಿಂಗಳು ನವೆಂಬರ್‌ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಈ ಮೆಗಾ ಹರಾಜು ಪ್ರಕ್ರಿಯೆ ಐಪಿಎಲ್ ಮಾದರಿಯಲ್ಲಿಯೇ ನಡೆಯಲಿದ್ದು, ಇದು ಮಹಿಳಾ ಲೀಗ್‌ನ ನಾಲ್ಕನೇ ಆವೃತ್ತಿಗೆ ಪ್ರಮುಖ ಅಂಕಣವಾಗಲಿದೆ. ಹರಾಜಿನ ದಿನಾಂಕ ಇನ್ನೂ ಅಧಿಕೃತವಾಗಿ ಪ್ರಕಟವಾಗದಿದ್ದರೂ ನವೆಂಬರ್ 26 ಅಥವಾ 27ರಂದು ಹರಾಜು ನಡೆಯುವ ಸಾಧ್ಯತೆಯಿದೆ. ಮೊದಲು ನವೆಂಬರ್ 26ರಿಂದ 29ರವರೆಗೆ ದಿನಾಂಕ ನಿಗದಿ ಮಾಡಲಾಗಿದ್ದರೂ, ಈಗ ವೇಳಾಪಟ್ಟಿಯನ್ನು ಎರಡು ದಿನಗಳಿಗೆ ಸೀಮಿತಗೊಳಿಸಲಾಗಿದೆ. ಹರಾಜು ಪ್ರಕ್ರಿಯೆ ಒಂದೇ ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.

ಮೆಗಾ ಹರಾಜು ದೆಹಲಿಯಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ಹೊಸ ತಂಡ ಸೇರ್ಪಡೆಗೊಳ್ಳುವ ಸಾಧ್ಯತೆಗಳಿದ್ದರೂ, ಅದು ನಡೆಯದಂತೆ ಕಾಣುತ್ತಿದೆ. ಹೀಗಾಗಿ, ನಾಲ್ಕನೇ ಸೀಸನ್‌ನಲ್ಲಿಯೂ ಐದು ತಂಡಗಳೇ ಸ್ಪರ್ಧಿಸಲಿವೆ. ಮೆಗಾ ಹರಾಜಿನಲ್ಲಿ ಸುಮಾರು 90 ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಎಲ್ಲಾ ಫ್ರಾಂಚೈಸಿಗಳು ನವೆಂಬರ್ 5ರೊಳಗೆ ಉಳಿಸಿಕೊಳ್ಳುವ ಆಟಗಾರ್ತಿಯರ ಪಟ್ಟಿಯನ್ನು ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ರಕ್ತದಲ್ಲಿ ಚಿತ್ರ ಬಿಡಿಸಿದ ಅಭಿಮಾನಿ ಮೇಲೆ ಪ್ರೇಮ್ ಗರಂ: ಈ ರೀತಿಯ ಪ್ರೀತಿ ಬೇಡ ಎಂದ ನಿರ್ದೇಶಕ!

0

ಕನ್ನಡದ ಜನಪ್ರಿಯ ನಿರ್ದೇಶಕ ಮತ್ತು ನಟ ಜೋಗಿ ಪ್ರೇಮ್ ಅವರ ಹುಟ್ಟುಹಬ್ಬದ ಸಂಭ್ರಮವನ್ನು ಅಭಿಮಾನಿಯೊಬ್ಬ ಅತಿಯಾದ ರೀತಿಯಲ್ಲಿ ಆಚರಿಸಿರುವ ಘಟನೆ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಅಭಿಮಾನಿಯೊಬ್ಬನು ತನ್ನ ರಕ್ತವನ್ನು ಇಂಕ್ ಆಗಿ ಬಳಸಿಕೊಂಡು, “ಹ್ಯಾಪಿ ಬರ್ತ್‌ಡೇ ಬಾಸ್” ಎಂದು ಬರೆದು ಚಿತ್ರ ಬಿಡಿಸಿಕೊಂಡಿದ್ದಾನೆ. ತನ್ನ ಪ್ರೀತಿಯ ನಿರ್ದೇಶಕನಿಗೆ ವಿಭಿನ್ನ ಉಡುಗೊರೆ ನೀಡಬೇಕೆಂಬ ಹುಮ್ಮಸ್ಸಿನಿಂದ ಈ ರೀತಿ ವಿಚಿತ್ರವಾಗಿ ನಡೆದುಕೊಂಡಿದ್ದಾನೆ.

ಎಸ್, ಅಕ್ಟೋಬರ್ 22ರಂದು ಜೋಗಿ ಪ್ರೇಮ್ ಹುಟ್ಟುಹಬ್ಬವಾಗಿದ್ದು, ಅದನ್ನು ಸ್ಮರಣೀಯಗೊಳಿಸಲು ಅಭಿಮಾನಿಯೊಬ್ಬ ತನ್ನದೇ ರಕ್ತದಲ್ಲಿ ಬರಹ ಬರೆದು ವಿಡಿಯೋ ರೂಪದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಆ ವೀಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಈ ವಿಡಿಯೋ ನೋಡಿ ಬೇಸರಗೊಂಡ ಪ್ರೇಮ್ ತಮ್ಮದೇ ಗ್ರಾಮೀಣ ಶೈಲಿಯಲ್ಲಿ ಅಭಿಮಾನಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. “ಮಕ್ಕಳೇ, ಇಂಥಹ ತಪ್ಪು ಮಾಡಬೇಡಿ. ಪ್ರೀತಿ ತೋರಿಸುವುದು ಒಳ್ಳೇದು, ಆದರೆ ಈ ರೀತಿ ಮಾಡಿದ್ರೆ ಅದು ಅಭಿಮಾನವಲ್ಲ, ಹಾನಿ.”ನಿಮ್ಮ ಪ್ರೀತಿಯನ್ನು ಹೀಗೆ ತೋರಿಸಬೇಡಿ. ರಕ್ತದಲ್ಲಿ ಬರೆಯೋದು, ನೋವು ತಗೊಳ್ಳೋದು ಯಾವುದಕ್ಕೂ ಅರ್ಥವಿಲ್ಲ. ನನಗೆ ಖುಷಿ ಕೊಡೋದಕ್ಕಿಂತ ನೋವು ಕೊಡುತ್ತದೆ ಎಂದರು.

ಇನ್ನೂ ನಿರ್ದೇಶಕ ಪ್ರೇಮ್ ಅವರ ಈ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಡೆಯುತ್ತಿದೆ. “ನಿಜವಾದ ಅಭಿಮಾನ ಅಂದರೆ ಕಲೆಯನ್ನು ಪ್ರೀತಿಸುವುದು, ರಕ್ತ ಸುರಿಸುವುದು ಅಲ್ಲ” ಎಂಬ ಸಂದೇಶ ನೀಡಿರುವ ಪ್ರೇಮ್ ಅವರ ಮಾತುಗಳಿಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ “ಅಡಿಕೆ” ಬಗ್ಗೆ ತಪ್ಪು ಮಾಹಿತಿ ಹರಡುತ್ತಿದೆ: ಆರಗ ಜ್ಞಾನೇಂದ್ರ

0

ಶಿವಮೊಗ್ಗ: ಅಡಿಕೆ ಬೆಳೆ ಕುರಿತಾಗಿ ಕೇಂದ್ರ ಸರ್ಕಾರ ಮುಂದುವರಿಸುತ್ತಿರುವ ಅಧ್ಯಯನವನ್ನು ಹೊರತುಪಡಿಸಿ, ಅಡಿಕೆ ಬೆಲೆಯಲ್ಲಿ ಏರುವಿಕೆ ಕಾಣುತ್ತಿದ್ದಂತೆ, ವಿಶ್ವ ಆರೋಗ್ಯ ಸಂಸ್ಥೆ ಅಡಿಕೆ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, “ಸಾವಿರಾರು ವರ್ಷ ಇತಿಹಾಸವಿರುವ ಅಡಿಕೆ ಕುರಿತಂತೆ ಅಪಪ್ರಚಾರವನ್ನು ಸಹಿಸಲು ಸಾಧ್ಯವಿಲ್ಲ. ಸಂಶೋಧನೆಯ ಫಲಿತಾಂಶ ಬರುವವರೆಗೆ ಇಂತಹ ತಪ್ಪು ಮಾಹಿತಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಆದೇಶ ನೀಡಬೇಕು. ಅಡಿಕೆಯಿಂದ ಬದುಕು ನಡೆಸುವ ಲಕ್ಷಾಂತರ ಕುಟುಂಬಗಳ ಬದುಕು ಹಾನಿಗೊಳಗಾಗಬಾರದು” ಎಂದರು.

ಅವರ ಅಭಿಪ್ರಾಯದಲ್ಲಿ, ವಿಶ್ವಸಂಸ್ಥೆಯ ಒತ್ತಡಕ್ಕೆ ಮಣಿಯದೆ, ಕೇಂದ್ರ ಸರ್ಕಾರ ಸಂಶೋಧನೆಯ ಫಲಿತಾಂಶ ಬರುವವರೆಗೆ ಸಂಯಮದಿಂದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಗೆ ಬರಬೇಕಿದೆ 200 ಕೋಟಿ ಅನುದಾನ!

0

ಧಾರವಾಡ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ರಾಜ್ಯದಲ್ಲೆ ಎರಡನೇ ದೊಡ್ಡ ಪಾಲಿಕೆ. 82 ವಾರ್ಡ್‌ಗಳು ಇದ್ದು, ಸುಮಾರು 13 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಈ ಪಾಲಿಕೆ ಅಭಿವೃದ್ಧಿಗೆ ವಿಶೇಷ ಅನುದಾನ ಅಗತ್ಯವಾಗಿದೆ.

ಮೇಯರ್ ಜ್ಯೋತಿ ಪಾಟೀಲ್ ತಿಳಿಸಿದಂತೆ, ಪಾಲಿಕೆಗೆ ನಿವೃತ್ತರ ಪಿಂಚಣಿ, ಪೌರ ಕಾರ್ಮಿಕರ ಸಂಬಳ ಸೇರಿದಂತೆ ಹಲವು ಅನುದಾನಗಳನ್ನು ಇನ್ನೂ ಸರ್ಕಾರದಿಂದ ಪಡೆಯಬೇಕಿದೆ.

ಮೇಯರ್ ಕಳೆದ ತಿಂಗಳು ಸಿಎಂ ಧಾರವಾಡಕ್ಕೆ ಭೇಟಿ ನೀಡಿ ವಿಶೇಷ ಅನುದಾನಕ್ಕೆ ಮನವಿ ಸಲ್ಲಿಸಿದ್ದರು, ಆದರೆ ಇನ್ನೂ ಯಾವುದೇ ಅನುದಾನ ಬಂದಿಲ್ಲ. ಹಳೆಯ ಬಾಕಿ ಅನುದಾನ ಸೇರಿಸಿದರೆ, ಪಾಲಿಕೆಗೆ ಸರಾಸರಿ 200 ಕೋಟಿ ರೂಪಾಯಿ ಅನುದಾನ ಬೇಕಾಗಿದೆ.

ಪಾಲಿಕೆ ಆಡಳಿತದಲ್ಲಿರುವ ಬಿಜೆಪಿ ಸದಸ್ಯರು ಸಿಎಂ ಭೇಟಿ ನೀಡಿ ಮನವಿ ಮಾಡುವ ಯೋಜನೆ ಮಾಡಿಕೊಂಡಿದ್ದಾರೆ. ಸ್ಥಳೀಯ ಜನರು ಕೂಡ ಈ ಅನುದಾನ ಬಂದರೆ ನಗರ ಅಭಿವೃದ್ಧಿ, ಪಿಂಚಣಿ ಮತ್ತು ಸಂಬಳ ಪಾವತಿ ಸುಗಮವಾಗುತ್ತದೆ ಎಂದು ನಿರೀಕ್ಷಿಸುತ್ತಿದ್ದಾರೆ.

error: Content is protected !!