ಬೆಂಗಳೂರು:- ಇತ್ತೀಚೆಗೆ ಯುವಕರು ಬೈಕ್ ಸ್ಟಂಟ್ ಹಾಗೂ ಅಪಾಯಕಾರಿ ರೀತಿಯ ವಾಹನ ಚಾಲನೆ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಇದರಿಂದ ಸಾಕಷ್ಟು ಸಾವು-ನೋವುಗಳು ಸಂಭವಿಸುತ್ತಿವೆ.
ಲಭ್ಯವಿರುವ ಅಂಕಿ-ಅಂಶಗಳು ಆಘಾತ ಮೂಡಿಸಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಾದ್ಯಂತ ವಾಹನ ಅಪಘಾತಗಳಲ್ಲಿ 27 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಅಪಘಾತಗಳಿಗೆ ಸಂಬಂಧಿಸಿದಂತೆ ಅಪ್ರಾಪ್ತರು ಮತ್ತು ಅವರ ಪೋಷಕರ ವಿರುದ್ಧ 1,805 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಇವರಿಂದ ಬರೋಬ್ಬರಿ ₹1.77 ಕೋಟಿ ದಂಡ ವಸೂಲಾಗಿದೆ.
ಬೆಂಗಳೂರು ನಗರದಲ್ಲಿ ಅಕ್ರಮ ಚಾಲನೆ ಪ್ರಕರಣಗಳು ಹೆಚ್ಚಾಗಿದ್ದು, ಮೈಸೂರು, ತುಮಕೂರು, ಕೊಡಗು ಮೊದಲಾದ ಜಿಲ್ಲೆಗಳು ನಂತರ ಸ್ಥಾನಗಳಲ್ಲಿ ಬರುತ್ತವೆ.
ಅಂಕಿ-ಅಂಶಗಳು:
ಬೆಂಗಳೂರು:
* 2023: 240 ಪ್ರಕರಣ – ₹18.31 ಲಕ್ಷ ದಂಡ
* 2024: 378 ಪ್ರಕರಣ – ₹16.99 ಲಕ್ಷ ದಂಡ
* 2025: 632 ಪ್ರಕರಣ – ₹15.65 ಲಕ್ಷ ದಂಡ
ಮೈಸೂರು:
* 2023: ಅಪ್ರಾಪ್ತರ ವಿರುದ್ಧ 21, ಪೋಷಕರ ವಿರುದ್ಧ 15 – ₹13.55 ಲಕ್ಷ ದಂಡ
* 2024: ಅಪ್ರಾಪ್ತರ ವಿರುದ್ಧ 27, ಪೋಷಕರ ವಿರುದ್ಧ 33 – ₹1.21 ಲಕ್ಷ ದಂಡ
* 2025: ಅಪ್ರಾಪ್ತರ ವಿರುದ್ಧ 19, ಪೋಷಕರ ವಿರುದ್ಧ 34 – ₹1.37 ಲಕ್ಷ ದಂಡ
ತುಮಕೂರು:
* 2023: 21 ಪ್ರಕರಣ (ಪೋಷಕರ ವಿರುದ್ಧ 8) – ₹78,000 ದಂಡ
* 2024: 35 ಪ್ರಕರಣ (ಪೋಷಕರ ವಿರುದ್ಧ 13) – ₹95,500 ದಂಡ
* 2025: 21 ಪ್ರಕರಣ (ಪೋಷಕರ ವಿರುದ್ಧ 6) – ₹1.50 ಲಕ್ಷ ದಂಡ
ಅಪ್ರಾಪ್ತ ಚಾಲನೆ ತಡೆಗಾಗಿ ಭಾರತೀಯ ನ್ಯಾಯಸಂಹಿತೆ ಮತ್ತು ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣಗಳು ದಾಖಲಿಸಲಾಗುತ್ತಿದ್ದು, ಸಂಬಂಧಿತ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ. ಪ್ರಮಾಣಿತ ವಾಹನ ನೋಂದಣಿಗಳನ್ನು ರದ್ದುಗೊಳಿಸಲು ಪ್ರಾದೇಶಿಕ ಸಾರಿಗೆ ಕಚೇರಿಗೆ ಶಿಫಾರಸು ಮಾಡಲಾಗಿದೆ.
ಪ್ರತಿವರ್ಷ ಜನವರಿಯಲ್ಲಿ ರಸ್ತೆ ಸುರಕ್ಷತಾ ತಿಂಗಳಂದು ವಿಶೇಷ ಅಭಿಯಾನಗಳು ಹಾಗೂ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ. ಬೆಂಗಳೂರು ನಗರದಲ್ಲಿ ವೀಲಿ ಸ್ಟಂಟ್‌ಗಳನ್ನು ತಡೆಯಲು 37 ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ, ಕಠಿಣ ನಿಗಾ ವಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರು ತಮ್ಮ ಸುರಕ್ಷತೆಯನ್ನು ಗಮನಿಸಿ ವಾಹನ ಚಾಲನೆ ಮಾಡುವಂತೆ ಪೊಲೀಸ್ ಇಲಾಖೆ ಎಚ್ಚರಿಸಿದೆ.